Saturday, December 28, 2024

ಬಾಂಬ್​ ಬೆದರಿಕೆ: CIDಗೆ ಸಚಿವ ಜಿ.ಪರಮೇಶ್ವರ್‌ ಆದೇಶ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ 15 ಶಾಲೆಗಳಿಗೆ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲಿಸಲು CIDಗೆ ಗೃಹ ಸಚಿವ ಜಿ.ಪರಮೇಶ್ವರ್ ಆದೇಶಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.ನಗರ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಬಾಂಬ್ ಬೆದರಿಕೆಯ ಇಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.

ಇದನ್ನೂ ಓದಿ: ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ : ಶಾಲೆಗಳಿಗೆ ಓಡೋಡಿ ಬಂದ ಪೋಷಕರು 

ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮತ್ತು ಮಕ್ಕಳು ಆತಂಕಪಡುವುದು ಬೇಡ ಎಂದು ತಿಳಿಸಿದ್ದಾರೆ.

ಯಾವ್ಯಾವ ಶಾಲೆಗಳಿಗೆ ಬೆದರಿಕೆ?

ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್‌ಪಿಎಸ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಸಂದೇಶ ಬಂದಿದೆ.

ಇಂದು ಎಂದಿನಂತೆ ಶಾಲೆಗಳು ಆರಂಭವಾಗಿತ್ತು. ಪ್ರತಿದಿನದಂತೆ ಶಾಲೆಗಳ ಇಮೇಲ್ ಪರಿಶೀಲಿಸಲಾಗಿತ್ತು. ಆಗ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಗಿದೆ. ಕೂಡಲೇ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಆತಂಕ ವ್ಯಕ್ತಪಡಿಸಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆಗಂತುಕರು ಯಾವ ಕಾರಣಕ್ಕಾಗಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿದ ಬಳಿಕ ಸತ್ಯಾಂಶ ಗೊತ್ತಾಗಲಿದೆ.

 

 

RELATED ARTICLES

Related Articles

TRENDING ARTICLES