Monday, December 23, 2024

ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಸವಿಗನ್ನಡ ಸಂಭ್ರಮ 2023

ದೊಡ್ಡಬಳ್ಳಾಪುರ: ಕನ್ನಡದ ಚಿಂತನೆಗಳನ್ನು ಸಾಕಾರಗೊಳಿಸುವ ಕೈಂಕರ್ಯದಲ್ಲಿ ವಿದ್ಯಾರ್ಥಿ ಯುವಜನರ ಪಾತ್ರ ಹಿರಿದು. ನಾಡಿನ ಅನನ್ಯತೆಯ ಅರಿವನ್ನು ಯುವಮನಸ್ಸುಗಳಲ್ಲಿ ಬಿತ್ತುವ ಕೆಲಸ ಆಗಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಬುಧವಾರ ನಡೆದ ಸವಿಗನ್ನಡ ಸಂಭ್ರಮ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು-ನುಡಿಯ ಬಗೆಗಿನ ಆಲೋಚನೆಗಳನ್ನು ಜಾಗೃತಗೊಳಿಸುವುದರ ಜೊತೆಗೆ ನಮ್ಮ ನೆಲ-ಜಲ ಭಾಷೆಯ ವಿಚಾರದಲ್ಲಿ ಉನ್ನತ ಸಾಧನೆ ಹಾಗೂ ಸಂಕಲ್ಪಕ್ಕೆ ಕಟಿಬದ್ದರಾಗಬೇಕು. ಶೈಕ್ಷಣಿಕ ವಾತಾವರಣದಲ್ಲಿ ಕನ್ನಡದ ವಿಚಾರಗಳನ್ನು ಬಿತ್ತುವ ಕೆಲಸ ಅನನ್ಯ ಎಂದರು.

ಇದನ್ನೂ ಓದಿ: ನೋಬೆಲ್ ಶಾಂತಿ ಪುರಸ್ಕೃತ ಹೆನ್ರಿ ಕಿಸಿಂಜರ್​ ನಿಧನ!

ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ನಗರ ಪ್ರದೇಶಗಳಲ್ಲಿ ಕನ್ನಡಕ್ಕೆ ಆತಂಕಗಳು ಹಲವು. ಆದರೆ ಗ್ರಾಮೀಣ ಭಾಗದಲ್ಲೂ ಕನ್ನಡತನಕ್ಕೆ ಸಂಕಷ್ಟಗಳಿವೆ. ಬಹುಭಾಷೆ ಮತ್ತು ಬಹು ಸಂಸ್ಕೃತಿಯ ತಾಣವಾಗಿರುವ ಆರ್.ಎಲ್.ಜಾಲಪ್ಪ ಕ್ಯಾಂಪಸ್‌ನಲ್ಲಿ ಈ ನೆಲದ ಭಾವನೆಗಳನ್ನು ಪ್ರಚೋದಿಸುವ ಮತ್ತು ಕನ್ನಡತನವನ್ನು ಜಾಗೃತಗೊಳಿಸುವ ಪ್ರಯತ್ನವಾಗಿ ಸವಿಗನ್ನಡ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಶಯಗಳಿಗೆ ಪೂರಕವಾಗಿ ವಿದ್ಯಾರ್ಥಿಗಳ ಸಮಗ್ರ ಪ್ರಗತಿ ನಿರೀಕ್ಷಿಸಲಾಗಿದೆ ಎಂದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂ.ಗ್ರಾ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕನ್ನಡ ಭಾಷೆಗೆ ಸುದೀರ್ಘ ಪರಂಪರೆ ಇದೆ. ಈ ನಾಡಿನ ಇತಿಹಾಸ, ಸಾಂಸ್ಕೃತಿಕ ಮಹತ್ವವನ್ನು ಸಾರುವ ಕೆಲಸ ನಿರಂತರವಾಗಿ ನಡೆಯಬೇಕು. ಮಕ್ಕಳಲ್ಲಿ ಸ್ಥಳೀಯವಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕೆಲಸವನ್ನು ಶಿಕ್ಷಣ ಸಂಸ್ಥೆಯೊಂದು ನಿರ್ವಹಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು.

ಸಾಧಕ ಗಣ್ಯರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆದಿಜಾಂಬವ ಪುರಾಣದ ಕಲಾವಿದ ಮುನಿಸ್ವಾಮಿ, ಹಿರಿಯ ಕನ್ನಡ ಪರ ಹೋರಾಟಗಾರ ತ.ನ.ಪ್ರಭುದೇವ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಕೆ.ಎಸ್.ಪ್ರಭಾ, ನಗರಸಭೆ ಮಾಜಿ ಸದಸ್ಯೆ ಪ್ರಮೀಳಾ ಮಹದೇವ್ ಅವರನ್ನು ಪುರಸ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿ ಹರಿಶ್ಚಂದ್ರ, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಪಿ.ರವಿ, ಲಯನ್ಸ್‌ ಸಂಸ್ಥೆ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಪ್ರಾಧ್ಯಾಪಕ ನುಗ್ಗೇಹಳ್ಳಿ ಶಂಕರ್, ಪ್ರೊ.ಕೆ.ಆರ್.ರವಿಕಿರಣ್, ದಾದಾಫೀರ್, ಪ್ರವೀಣ್, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಗಣ್ಯರು ಉಪಸ್ಥಿತರಿದ್ದರು.

1 ಸಾವಿರ ಮೀಟರ್‌ ಕನ್ನಡ ಧ್ವಜದ ಮೆರವಣಿಗೆ:
ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಿಂದ ಜಾಲಪ್ಪ ಕ್ಯಾಂಪಸ್‌ ವರೆಗೆ ಅತ್ಯಾಕರ್ಷಕ ಮೆರವಣಿಗೆ ನಡೆಯಿತು. 1 ಸಾವಿರ ಮೀಟರ್ ಉದ್ದದ ಕನ್ನಡ ಧ್ವಜವನ್ನು ಸುಮಾರು 3 ಸಾವಿರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಕೊಂಡೊಯ್ದದ್ದು ವಿಶೇಷವಾಗಿತ್ತು. ತಮಟೆ, ವೀರಗಾಸೆ, ಗಾರುಡಿ ಗೊಂಬೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡವು. ಸಹಸ್ರಾರು ವಿದ್ಯಾರ್ಥಿಗಳು ಕನ್ನಡ ನಾಡಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದದ್ದು ಗಮನ ಸೆಳೆಯಿತು.

RELATED ARTICLES

Related Articles

TRENDING ARTICLES