ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ತಲುಪುತ್ತಿದೆ. ಯಾರಿಗೆ ತಲುಪ್ತಿಲ್ಲ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಹೇಳಲಿ ಎಂದು ಅಶೋಕ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು (ಬಿಜೆಪಿಯವರು) ಇಲ್ಲೇ ಏನೂ ಬಿಚ್ಚಿಟ್ಟಿಲ್ಲ, ಇನ್ನು ಅಧಿವೇಶನದಲ್ಲಿ ಬಿಚ್ಚಿಡ್ತಾರಾ? ಬಿಜೆಪಿಯವ್ರಿಗೆ ಸುಳ್ಳು ಹೇಳೋದೇ ಬಂಡವಾಳ. ಬರೀ ಸುಳ್ಳು ಹೇಳ್ತಾರೆ ಎಂದು ಗುಡುಗಿದರು.
1.17 ಲಕ್ಷ ಗೃಹಲಕ್ಷ್ಮಿ ಜನರಿಗೆ ಹಣ ಕೊಟ್ಟಿದ್ದೀವಿ. ಇನ್ನೂ 3 ಲಕ್ಷ ಜನರಿಗೆ ಕೊಟ್ಟಿಲ್ಲ. ನಾವು 1.5 ಕೋಟಿ ಜನರಿಗೆ ಉಚಿತ ಕರೆಂಟ್ ಕೊಡುತ್ತಿದ್ದೇವೆ. 4.34 ಕೋಟಿ ಜನರಿಗೆ ಅಕ್ಕಿ ಬದಲು ದುಡ್ಡು ಕೊಡುತ್ತಿದ್ದೇವೆ. ಇದು ಸುಳ್ಳಾ? ಕೆಲವರಿಗೆ ತಾಂತ್ರಿಕ ಕಾರಣದಿಂದ ಗೃಹಲಕ್ಷ್ಮಿ ದುಡ್ಡು ಬಂದಿಲ್ಲ. ಡಿಸೆಂಬರ್ ಅಂತ್ಯದವರೆಗೆ ಗೃಹಲಕ್ಷ್ಮಿ ಹಣ ಕೊಡ್ತೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಹಣ ಯಾಕೆ ಕೊಡ್ತಿಲ್ಲ?
ಕೇಂದ್ರದಿಂದ ಬರ ಪರಿಹಾರದ ಹಣ (ಅನುದಾನ) ಬಂದಿಲ್ಲ. ಎನ್‌ಎಇಆರ್‌ಎಫ್ ಹಣ ನಮ್ಮದು, ನಮ್ಮ ಹಣ ಯಾಕೆ ಕೊಡ್ತಿಲ್ಲ? ನಾಲ್ಕು ಲಕ್ಷ ಕೋಟಿ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ಹಣ ಹೋಗುತ್ತಿದೆ. ಆದ್ರೆ ನಮಗೆ 50 ರಿಂದ 60 ಸಾವಿರ ಕೋಟಿ ಅಷ್ಟೇ ಬರ್ತಿದೆ. ನಮ್ಮ ಪಾಲಿನ ಹಣ ನಮಗೆ ಕೊಡುವಲ್ಲಿ ಕೇಂದ್ರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗರಂ ಆದರು.