Friday, December 27, 2024

28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುತ್ತೇವೆ: ಕುಮಾರಸ್ವಾಮಿ ಮತ್ತು ವಿಜಯೇಂದ್ರ

ರಾಮನಗರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಬಿಡದಿಯ ತೋಟಕ್ಕೆ ಆಗಮಿಸಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಲೋಕಸಭೆ ಚುನಾವಣೆ, ಎರಡೂ ಪಕ್ಷಗಳ ಮೈತ್ರಿ ಹಾಗೂ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾಗಿ ಇಬ್ಬರೂ ನಾಯಕರು ಭೇಟಿಯ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.

ದೇಶದ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ನರೇಂದ್ರ ‌ಮೋದಿಯವರೇ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಕ್ಷೇತ್ರ ಹಂಚಿಕೆ ಕುರಿತು ‌ಹೈಕಮಾಂಡ್ ನಲ್ಲಿ ‌ಚರ್ಚಿಸುತ್ತಾರೆ. ರಾಜ್ಯದಲ್ಲಿ ನಮ್ಮ ಮೈತ್ರಿಕೂಟ 28ಕ್ಕೆ‌ 28 ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಲಿದ್ದೇವೆ ಎಂದರು ಕುಮಾರಸ್ವಾಮಿ ಅವರು.

ಇದನ್ನೂ ಓದಿ: ಅಭಿಮಾನಿ ಬೈಕ್ ಅನ್ನು ತಮ್ಮ ಟೀ ಶರ್ಟ್​ ನಿಂದ ಕ್ಲೀನ್ ಮಾಡಿದ ದೋನಿ!: ವೀಡಿಯೋ ವೈರಲ್

2006ರಲ್ಲಿ ಮೈತ್ರಿ ಸರಕಾರದ ಕಾಲದಲ್ಲಿ ಯಡಿಯೂರಪ್ಪ ‌ಹಾಗೂ ನಾನು ಜೊತೆಯಾಗಿ ಅತ್ಯುತ್ತಮ ‌ಕೆಲಸ ನಿರ್ವಹಿಸಿದ್ದೇವೆ. ಅದು ಪುನಾ ಮರುಕಳಿಸಬೇಕು ಎಂಬುದು ರಾಜ್ಯದ ಜನರ ಆಸೆಯಾಗಿದೆ. ವಿಜಯೇಂದ್ರ‌, ‌ನಿಖಿಲ್‌ ಕುಮಾರಸ್ವಾಮಿ ಅವರುಗಳು, ‌ನಾನು‌ ಎರಡೂ ಪಕ್ಷಗಳ ಎಲ್ಲಾ ನಾಯಕರು ಜೊತೆಗೂಡಿ ‌ 2006-07ರ ಉತ್ತಮ ಸ್ಥಿತಿಯನ್ನು ಮರಳಿ ತರಲು ಶ್ರಮಿಸುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಹೋದರರ ರೀತಿ ರಾಜ್ಯದಲ್ಲಿ ಓಡಾಡಲಿದ್ದಾರೆ. ಎರಡೂ ಪಕ್ಣಗಳು ಒಟ್ಟಾಗಿ ‌ಹೋರಾಟ ನಡೆಸಲಿವೆ. ಆಡಳಿತ ಪಕ್ಷದ ತಪ್ಪುಗಳನ್ನು ದಾಖಲೆ ಸಮೇತ‌ ಎತ್ತಿ ಹಿಡಿಯುತ್ತೇವೆ ಎಂದರು ಅವರು.

ರಾಜ್ಯದಲ್ಲಿ ಕಾಂಗ್ರೆಸ್ಸಿನ ಏಕೈಕ ಸಂಸದರೂ ಇರಬಾರದು: ವಿಜಯೇಂದ್ರ‌

ರಾಜ್ಯದ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಒಟ್ಟಾಗಿ‌ ಹೋಗುವ ಕುರಿತು ಇಬ್ಬರು‌ ಮಾತುಕತೆ ನಡೆಸಿದ್ದೇವೆ. ದೆಹಲಿಯಲ್ಲಿ ‌ವರಿಷ್ಠರು ಸೀಟು‌ ಹಂಚಿಕೆ ‌ಬಗ್ಗೆ ಚರ್ಚಿಸುತ್ತಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಮೋದಿ,‌ ನಡ್ಡಾ,‌ ಅಮಿತ್ ಶಾ,‌ ಹೆಚ್ ಡಿಕೆ ಅವರು ಈಗಾಗಲೇ ದೆಹಲಿಯಲ್ಲಿ ‌ಚರ್ಚೆ ನಡೆಸಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಲು ನಿರ್ಧರಿಸಲಾಗಿದೆ. ನಾನು ಕೂಡ ಈಗಾಗಲೇ ಮಾಜಿ ಪ್ರಧಾನಿಗಳಾದ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಹಿರಿಯರಾದ‌ ಹೆಚ್.ಡಿ.ಕುಮಾರಸ್ವಾಮಿ ಅವರ‌ ಜತೆಯೂ ಚರ್ಚಿಸಿದ್ದೇನೆ. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಏಕೈಕ ಸಂಸದ ಡಿ.ಕೆ.ಸುರೇಶ್ ಅವರನ್ನು ಎದುರಿಸುವ ಕುರಿತು ನಾಲ್ಕು ಗೋಡೆಗಳ ಮಧ್ಯೆ ಕೂತು ಕಾರ್ಯತಂತ್ರ ಮಾಡಲಾಗುವುದು ಎಂದರು ವಿಜಯೇಂದ್ರ‌. ಅಲ್ಲದೆ; ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಸಂಸದನೂ ಇರಬಾರದು. ದೇಶದ – ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ – ಬಿಜೆಪಿ ಮೈತ್ರಿಯಾಗಿದೆ ಎಂದರು ಅವರು.

ಸಿಎಂ ಜನತಾ‌ದರ್ಶನಕ್ಕೆ ಹೆಚ್ ಡಿಕೆ ಕೌಂಟರ್:

ಸಿಎಂ ಸಿದ್ಧರಾಮಯ್ಯ ಅವರು ಜನತಾದರ್ಶನ ಮಾಡುವುದಾಗಿ ಜಾಹೀರಾತು ಕೊಟ್ಟು ಹೇಳಿದ್ದಾರೆ. ಅವರ ಜನತಾದರ್ಶನ ಜಾಹೀರಾತಿಗೆ ಸೀಮಿತವಾಗಿದೆ ಎಂದು ಟಾಂಗ್ ನೀಡಿದ ಕುಮಾರಸ್ವಾಮಿ, ಜನರ ತೆರಿಗೆ ಖರ್ಚು ಮಾಡಿ ಜಾಹಿರಾತು‌ ನೀಡ್ತಿದಾರೆ. ಪ್ರತಿ ದಿನ ಆ ಜಾಹೀರಾತುಗಳಲ್ಲಿ ಸುಳ್ಳು‌ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಾನು, ಯಡಿಯೂರಪ್ಪ ಇದ್ದಾಗ ಹೇಗೆ ಜನತಾದರ್ಶನ ನಡೆಸಿದೆವು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಬಿಡುವು ಪಡೆಯದೇ ಅಸಂಖ್ಯಾತ ಜನರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕೊಡುತ್ತಿದ್ದ ಆ ದಿನಗಳನ್ನು ಜನರು ಮರೆತಿಲ್ಲ ಎಂದರು.

ಈ ವೇಳೆ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಪಕ್ಷದ ರಾಮನಗರ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಮಂಜುನಾಥ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES