ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು, ನಾಳೆ ಐತಿಹಾಸಿಕ ಕಂಬಳ ನಡೆಯುತ್ತಿದೆ. ಬೆಂಗಳೂರು ಕಂಬಳ.. ನಮ್ಮ ಕಂಬಳ.. ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಂಬಳ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಪಂದ್ಯ ಆಯೋಜಿಸಲಾಗಿದೆ.ಈ ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜ್ಕುಮಾರ್ ಅವರು ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು.
ಈ ಕಂಬಳದ ವಿಶೇಷತೆಗಳೇನು..?
- ಬೆಂಗಳೂರು ಕಂಬಳದಲ್ಲಿ 200 ಜೋಡಿ ಕೋಣಗಳು ಭಾಗಿಯಾಗುತ್ತಿವೆ. 228 ಕೋಣಗಳ ಜೋಡಿ ರಿಜಿಸ್ಟ್ರೇಷನ್ ಆಗಿದ್ದು 200 ಜೋಡಿ ಫೈನಲ್ ಆಗಿದೆ.
- ಬೆಂಗಳೂರು ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗಿದೆ.
- ಕಂಬಳದ ಕರೆಗೆ ರಾಜ ಮಹಾರಾಜ ಎಂದು ಹೆಸರು ಕೊಡಲಾಗಿದೆ.
- ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲಾಗಿದೆ.
- ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವವಿದ್ದು, ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ ಕೂಡ ಇರಲಿದೆ.
- ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ. ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದ್ದು, ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ.
- ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ.
- ಆಹಾರ, ನೀರಿನ ಬಗ್ಗೆ ಕೋಣಗಳ ಮಾಲೀಕರು ವಿಶೇಷ ಕಾಳಜಿ ವಹಿಸಿದ್ದಾರೆ. ಕೋಣಗಳಿಗೆ ಬೈಹುಲ್ಲು, ಕುಡಿಯುವ ನೀರು ಊರಿನಿಂದಲೇ ತರಲಾಗುತ್ತದೆ. ಯಾಕೆಂದರೆ ಆಹಾರ ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ.
- ಕಂಬಳದ ಸ್ಥಳದಲ್ಲಿ ಪಶುವೈದ್ಯರು, ನಾಟಿ ವೈದ್ಯರು ಸದಾ ಲಭ್ಯರಿದ್ದಾರೆ.
ಗೆದ್ದ ಕೋಣಗಳಿಗೆ ಬಹುಮಾನ
ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು
ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು
ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.