ಬೆಂಗಳೂರು : ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಹೆಚ್ಎಎಲ್ ಏರ್‌ಪೋರ್ಟ್‌ಗೆ ತಲುಪಿದೆ.
ವಿಶೇಷ ವಿಮಾನದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರು ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮ ನಮನ ಸಲ್ಲಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಇಂಧನ ಸಚಿವ ಕೆ.ಜೆ. ಜಾರ್ಜ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ, ಎಂಎಲ್ಸಿ ಗೋವಿಂದರಾಜು ಅವರು ಹೆಚ್ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದ್ದಾರೆ. ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದ್ದಾರೆ.
ನವೆಂಬರ್ 22ರಂದು ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಪ್ರಾಂಜಲ್ ಹುತಾತ್ಮರಾಗಿದ್ದರು. ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ಜಿಗಣಿ ನಂದನವನ ಬಡಾವಣೆ ಮನೆಯ ಸಮೀಪ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಪ್ರಾಂಜಲ್ ಪೋಷಕರು ಇಲ್ಲಿ ವಾಸವಿದ್ದಾರೆ. ದಸರಾ ಹಬ್ಬಕ್ಕೆ ಬಂದಿದ್ದ ಪ್ರಾಂಜಲ್, ಒಂದು ವಾರವಿದ್ದು ಬಳಿಕ ಕರ್ತವ್ಯಕ್ಕೆ ತೆರಳಿದ್ದರು. ಬೆಂಗಳೂರು ಹೊಸೂರು ಹೆದ್ದಾರಿಯ ಕೂಡ್ಲು ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಯಾತ್ರೆ ಮುಗಿಯಲಿದೆ ಎಂದು ತಿಳಿದುಬಂದಿದೆ.