Thursday, December 19, 2024

ಕೇಂದ್ರದ ಕಾರ್ಪೊರೇಟ್ ‌ನೀತಿಗಳು ದುಡಿಯುವ ಜನರ ಬದುಕುಗಳನ್ನು ಕಸಿಯುತ್ತಿವೆ: ಆರ್.ಚಂದ್ರತೇಜಸ್ವಿ ಆರೋಪ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಕಾರ್ಪೊರೇಟ್ ಬಂಡವಾಳದಾರರ ಪರವಾದ ‌ನೀತಿಗಳು ದುಡಿಯುವ ಜನರನ್ನು ಭಾರಿ ಸಂಕಷ್ಟಕ್ಕೆ ದೂಡಿವೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಆರೋಪಿಸಿದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಈ ಹಿಂದಿನ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ ಪರ್ಯಾಯ ಜನಪರ ನೀತಿಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ-ಎಸ್‌ಕೆಎಂ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಇದೇ ನವೆಂಬರ್ 26ರಿಂದ 28 ರ ವರೆಗೆ ನಡೆಯುವ ಮಹಾಧರಣಿಯ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಕಾರ್ಪೊರೇಟ್ ಬಂಡವಾಳದಾರರ ಪರವಾದ ನೀತಿಗಳು ದೇಶದ ದುಡಿಯುವ ಜನರನ್ನು ಭಾರಿ ಸಂಕಷ್ಟಕ್ಕೆ ದೂಡಿವೆ. ಕಾರ್ಪೊರೇಟ್ ತೆರಿಗೆ ಕಡಿತ ಮಾಡಿ, ಸಾಮಾನ್ಯ ಜನತೆಯ ಮೇಲೆ ಜಿ.ಎಸ್.ಟಿ. ಹೊರೆ ಹೇರಿದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಬಳಕೆಗೆ ಹೆಚ್ಚಿನ ತೆರಿಗೆ ವಿಧಿಸುವ ಪರಿಣಾ ಅಗತ್ಯ ಸರಕುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ ಎಂದು ಆರೋಪಿಸಿದರು.

ರಾಷ್ಟ್ರೀಯ ನಗದೀಕರಣ ಪೈಪ್‌ ಲೈನ್ ಯೋಜನೆ ಮೂಲಕ ವಿದ್ಯುತ್, ರೈಲ್ವೆ, ಕಲ್ಲಿದ್ದಲು, ದೂರ ಸಂಪರ್ಕ, ವಿಮಾ ಕ್ಷೇತ್ರ, ವಿಮಾನಯಾನ. ರಕ್ಷಣಾ ಸಾಮಗ್ರಿ, ಉತ್ಪಾದನಾ ಕೈಗಾರಿಕೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಆಹಾರ, ನೀರು, ಭೂಮಿ, ಗಣಿ, ಅರಣ್ಯ ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸಿ, ಸೇವೆಯನ್ನು ಸರಕಾಗಿಸಲು ಹೊರಟಿದೆ.

ಇದನ್ನೂ ಓದಿ: ನಾದಿನಿ ಜೊತೆ ಅಸಭ್ಯ ವರ್ತನೆ ಪ್ರಶ್ನಿಸಿದ್ದಕ್ಕೆ ಮುಖದ ಮೇಲೆ ಮೂರ್ತ ವಿಸರ್ಜಿಸಿ ವಿಕೃತಿ!

ಸರ್ಕಾರದ ಈ ಕ್ರಮಗಳು ಕಾರ್ಪೊರೇಟ್ ವರ್ಗದ ಸಂಪತ್ತನ್ನು ಹೆಚ್ಚಿಸಿದ್ದರೆ, ಸಾಮಾನ್ಯ ಜನರ ಜೀವನವನ್ನು ದಾರಿದ್ರ್ಯಕ್ಕೆ ತಳ್ಳಿವೆ. ರಾಷ್ಟ್ರೀಯ ಆದಾಯದಲ್ಲಿ ಅತ್ಯಂತ ಮೇಲ್‌ಸ್ತರದ ಶೇ.1 ರಷ್ಟು ಜನ ಶೇ.40.5 ರಷ್ಟು ಒಡೆತನ ಹೊಂದಿದ್ದರೆ, ಶೇ.50 ರಷ್ಟು ಸಾಮಾನ್ಯ ಜನರ ಒಡೆತನ ಶೇ.3ಕ್ಕೆ ಕುಸಿದಿದೆ. ನಿರುದ್ಯೋಗ, ಬಡತನ, ಹಸಿವು, ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ರೈತರು ನಡೆಸಿದ ಐತಿಹಾಸಿಕ ಹೋರಾಟದ ಪರಿಣಾಮ, ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಿತು. ಆದರೂ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ) ಕಾಯ್ದೆ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸಿಲ್ಲ. ಸರ್ಕಾರದ ಈ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ ಸುಳಿಗೆ ಸಿಲುಕಿಸಿ ಕೃಷಿಯಿಂದ ಹೊರದಬ್ಬುವಂತೆ ಮಾಡಿವೆ. ಜೊತೆಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಕಿಡಿ ಕಾರಿದರು.

ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಜನತೆಯನ್ನು ವಿಭಜಿಸಿ ನೈಜ ಸಮಸ್ಯೆಗಳಿಂದ ಮರೆಮಾಚಲು ಪ್ರಯತ್ನಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.

ಹೊಸ ನಿರೀಕ್ಷೆಗಳೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರವು ರೈತರ-ಕಾರ್ಮಿಕರ- ಕೂಲಿಕಾರರ-ದಲಿತರ-ಮಹಿಳೆಯರ-ಅಲ್ಪಸಂಖ್ಯಾತರ-ಆದಿವಾಸಿಗಳ ರಕ್ಷಣೆಗೆ ತನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಮೆಟ್ರೋ ರೈಲಲ್ಲಿ ಭಿಕ್ಷೆ ಬೇಡಿದವನಿಗೆ ₹500 ದಂಡ!

‘ದೇಶದ ಸಂಪತ್ತನ್ನು ರಕ್ಷಿಸಿ, ಜನರ ಬದುಕನ್ನು ಉಳಿಸುವ ಪರ್ಯಾಯ ನೀತಿಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನವೆಂಬರ್ 26-28, 2023 ರಂದು ದೇಶಾದ್ಯಂತ ಎಲ್ಲಾ ರಾಜಭವನಗಳ ಮುಂದೆ ಸಹಸ್ರಾರು ಜನರ ಮಹಾಧರಣಿ ನಡೆಸಲು ಎಸ್‌ಕೆಎಂ-ಜೆಸಿಟಿಯು ಕರೆ ನೀಡಿವೆ. ಇದರ ಭಾಗವಾಗಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ 72 ಗಂಟೆಗಳ ಮಹಾಧರಣೆ ಹಮ್ಮಿಕೊಳ್ಳಲಾಗಿದ್ದು, ಈ ಮಹಾಧರಣಿಗೆ ರೈತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪ್ರಚಾರಾಂದೋಲನದಲ್ಲಿ ಕಾರಹಳ್ಳಿ ಶ್ರೀನಿವಾಸ್, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಿ.ಹೆಚ್.ರಾಮಕೃಷ್ಣ ಸಿಐಟಿಯು ಮುಖಂಡ ಪಿ.ಎ.ವೆಂಕಟೇಶ್, ಚೌಡಪ್ಪ, ವಕೀಲರಾದ ರೇಣುಕಾರಾಧ್ಯ, ನಿವೃತ್ತ ಪ್ರೋ. ಚಂದ್ರಪ್ಪ ಮುಖಂಡರಾದ ವಿಜಯ್ ಕುಮಾರ್, ಸದಾಶಿವಯ್ಯ, ಇನಾಯತ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES