Friday, November 22, 2024

ಬಿಡದಿಯಲ್ಲಿ 3ನೇ ಕಾರು ಉತ್ಪಾದನಾ ಘಟಕ ಆರಂಭಿಸಲು ಟೊಯೋಟಾ: ಸರ್ಕಾರದ ನಡುವೆ ಒಡಂಬಡಿಕೆ

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ. ವೆಚ್ಚದಲ್ಲಿ ತನ್ನ ಮೂರನೇ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲು ಸರಕಾರ ಮತ್ತು ಕಂಪನಿ ನಡುವೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಮತ್ತು ಟೊಯೋಟಾ ಪರವಾಗಿ ಕಂಪನಿಯ ಉಪಾಧ್ಯಕ್ಷ ಸುದೀಪ್‌ ದಳವಿ ಅಂಕಿತ ಹಾಕಿ, ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.

ಬಳಿಕ ಮಾತನಾಡಿದ ಸಚಿವ ಪಾಟೀಲ್‌ ಅವರು, ʻಟೊಯೋಟಾ ರಾಜ್ಯದಲ್ಲಿ ನೆಲೆಯೂರಿ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲೇ ಕಂಪನಿಯು ನೂತನ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ.
 ಈ ಒಪ್ಪಂದದಿಂದ ಸ್ಥಳೀಯ ಮಟ್ಟದಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ನೂತನ ತಂತ್ರಜ್ಞಾನಾಧಾರಿತ ಕಾರುಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿವೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟೊಯೋಟಾ ಕಂಪನಿಯ ಎರಡು ಉತ್ಪಾದನಾ ಘಟಕಗಳು ಈಗಾಗಲೇ ಬಿಡದಿಯಲ್ಲಿ ಸಕ್ರಿಯವಾಗಿವೆ. ಉದ್ದೇಶಿತ ಮೂರನೇ ಘಟಕದಲ್ಲಿ ವರ್ಷಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಇದರಿಂದ ಅಂದಾಜು 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಸರ್ಕಾರವು ಕೈಗಾರಿಕಾ ರಂಗದ ಬೆಳವಣಿಗೆಗೆ ಆದ್ಯ ಗಮನ ಕೊಟ್ಟಿದ್ದು, ವಿದ್ಯುತ್‌ ಚಾಲಿತ ವಾಹನಗಳ ವಲಯ ಸೇರಿದಂತೆ ಒಟ್ಟು 9 ವಲಯಗಳಿಗೆ ಅನ್ವಯವಾಗುವಂತೆ ವಿಷನ್‌ ಗ್ರೂಪ್‌ಗಳನ್ನು ರಚಿಸಿದೆ. ಇವುಗಳಲ್ಲಿ ಗಣ್ಯ ಉದ್ಯಮಿಗಳೇ ಇದ್ದು, ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಲಾಗುವುದು. ಜತೆಗೆ ಕರ್ನಾಟಕ ಇನ್ವೆಸ್ಟ್‌ಮೆಂಟ್‌ ಫೋರಂ ಮತ್ತು ಸ್ಟ್ರಾಟೆಜಿಕ್‌ ಇನ್ವೆಸ್ಟ್‌ಮೆಂಟ್ ಫೋರಂ ಎರಡಕ್ಕೂ ಹೊಸ ರೂಪ ನೀಡಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಟೊಯೋಟಾ ವ್ಯವಸ್ಥಾಪಕ ನಿರ್ದೇಶಕ ಮಸಕಝು ಯೋಶಿಮುರ, ಉಪಾಧ್ಯಕ್ಷರಾದ ಸ್ವಪ್ನೇಶ್‌ ಮರು, ವಿಕ್ರಂ ಗುಲಾಟಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

 

 

RELATED ARTICLES

Related Articles

TRENDING ARTICLES