ಚಿಕ್ಕಮಗಳೂರು: ನಗರದ ಮರವಂಜಿ ಗ್ರಾಮದ ಮನೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿರಿಯಾನಿ ತಿಂದ 17 ಜನರು ಅಸ್ವಸ್ಥಗೊಂಡಿದ್ದಾರೆ. ಕಡೂರು ಆಸ್ಪತ್ರೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಮಸ್ಥರು ಸೋಮವಾರ ವಿಷಪೂರಿತವಾದ ಮಾಂಸಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ.
ಘಟನೆ ವಿವರ:
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಯಾರಿಸಿದ್ದ ಬಿರಿಯಾನಿಯನ್ನು ಸೋಮವಾರ ಕುಟುಂಬಸ್ಥರು ಹಾಗೂ ಕೆಲ ಗ್ರಾಮಸ್ಥರು ಸೇವಿಸಿದ್ದಾರೆ. ಬಳಿಕ 17 ಜನರು ಅಸ್ವಸ್ಥರಾಗಿದ್ದಾರೆ. ಬಿರಿಯಾನಿ ಸೇವಿಸಿದ ಬಳಿಕ ಕೆಲವರಿಗೆ ವಾಂತಿ, ಭೇಧಿ ಕಾಣಿಸಿಕೊಂಡಿದೆ. ಕೆಲವರು ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಂಬ್ಯುಲೆನ್ಸ್ ಸಹಾಯದಿಂದ ಎಲ್ಲರನ್ನೂ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಎಸ್. ಎನ್. ಉಮೇಶ್ ಹಾಗೂ ಇತರ ಸಿಬ್ಬಂದಿ ಸೂಕ್ತ ತಪಾಸಣೆ ನಡೆಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಯ ಮೂರು ಕೊಠಡಿಯಲ್ಲಿ ಎಲ್ಲರನ್ನೂ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿದರು.
ಭಾನುವಾರ ತಯಾರಿಸಿದ ಮಾಂಸಹಾರ ಸೋಮವಾರಕ್ಕೆ ವಿಷಪೂರಿತಗೊಂಡಿದ್ದು, ಅದನ್ನೇ ಗ್ರಾಮಸ್ಥರು ಸೇವಿಸಿದ್ದ ಹಿನ್ನೆಲೆಯಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಡಾ. ಎಸ್. ಎನ್. ಉಮೇಶ್ ಹೇಳಿದ್ದಾರೆ.