ಹಾವೇರಿ : ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಜೋಡೆತ್ತುಗಳ ತರ ಕೆಲಸ ಮಾಡಿದ್ರೆ, ಕಳ್ಳೆತ್ತುಗಳು ಏನು ಕೆಲಸ ಮಾಡ್ತಿದ್ದಾರೆ? ಜೊಡೆತ್ತುಗಳ ಜೊತೆಗೆ ಕಳ್ಳೆತ್ತುಗಳಿವೆ, ಕಳ್ಳೆತ್ತುಗಳ ನಿಜವಾದ ಬಣ್ಣ ರಾಜ್ಯದ ಜನತೆಗೆ ಗೊತ್ತಾಗುತ್ತಿದೆ ಎನ್ನುವು ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿಯನ್ನ ಮಾಜಿ ಸಚಿವ ಬಿ. ಶ್ರೀರಾಮುಲು ‘ಕಳ್ಳೆತ್ತು’ ಎಂದು ಜರಿದಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರ ಘೋಷಣೆ ಬಳಿಕ ಪಕ್ಷಕ್ಕೆ ಶಕ್ತಿ ಕೊಡುವ ಕೆಲಸ ಆಗಿದೆ. ವಿಪಕ್ಷ ನಾಯಕನಾಗಿ ಆರ್. ಅಶೋಕ್ ಅವರನ್ನ ಆಯ್ಕೆ ಮಾಡಲಾಗಿದೆ. ವಿಜಯೇಂದ್ರ ಹಾಗೂ ಅಶೋಕ್ ಜೋಡೆತ್ತುಗಳು ಎಂದು ಬಣ್ಣಿಸಿದ್ದಾರೆ.
ಕಳ್ಳೆತ್ತುಗಳ ಮಧ್ಯೆ ಜೋಡೆತ್ತುಗಳು ಹೋರಾಟ ಮಾಡುತ್ತಿವೆ. ಆಡಳಿತ ಯಂತ್ರ ಕುಸಿದು ಬಿದ್ದು ಹೋಗಿದೆ. ಅಭಿವೃದ್ಧಿ ವಿಚಾರದಲ್ಲಿ ನಿಂತ ನೀರಾಗಿದೆ. ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಗ್ಯಾರಂಟಿ ಕೊಡಲು ಕಳ್ಳೆತ್ತುಗಳು ಕೆಲಸ ಮಾಡುತ್ತಿವೆ. ಹೋರಾಟದ ಮೂಲಕ ಜನರಿಗೆ ನ್ಯಾಯ ಕೊಡಿಸಲು ಜೋಡೆತ್ತುಗಳು ಕೆಲಸ ಮಾಡುತ್ತವೆ ಎಂದು ಹೇಳಿದ್ದಾರೆ.
ಜೋಡೆತ್ತುಗಳು ಜನರ ವಿಶ್ವಾಸ ಗಳಿಸಲಿವೆ
ತೆರೆಮರೆಯಲ್ಲಿ ಅವರಲ್ಲಿ ಜಗಳವಾಗುತ್ತಿದೆ. ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ನಾವೇನು ಹುಚ್ಚರ? ಈ ಸರ್ಕಾರ ಐದು ವರ್ಷ ಇರಲಿ, ಸರ್ಕಾರ ಐದು ವರ್ಷ ಇರಲಿ ಅಂತಾ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕಳ್ಳೆತ್ತುಗಳು ಮತ್ತು ಜೋಡೆತ್ತುಗಳ ನಡುವೆ ಹೋರಾಟ ನಡೆಯಲಿದೆ. ಕಳ್ಳೆತ್ತುಗಳ ಬಣ್ಣ ಬಯಲಾಗಲಿದೆ, ಜೋಡೆತ್ತುಗಳು ಜನರ ವಿಶ್ವಾಸ ಗಳಿಸಲಿವೆ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ್ದಾರೆ.