Monday, December 23, 2024

ಎಂಪಿ ದೇವೇಂದ್ರಪ್ಪ ಪುತ್ರನಿಂದ ಯುವತಿಗೆ ವಂಚನೆ; ಅವನಿಗೆ 42, ಅವಳಿಗೆ 24 ಏನಿದು ಲವ್ವಿಡವ್ವಿ?

ಮೈಸೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರೊ. ರಂಗನಾಥ್‌ ಅವರ ಮೇಲೆ ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಪ್ರಕರಣದ ದಾಖಲಾಗಿದೆ.

ಇದೇ ವೇಳೆ ಪ್ರೊ. ರಂಗನಾಥ್‌ ಅವರು ಯುವತಿಯ ಮೇಲೆ ಹನಿಟ್ರ್ಯಾಪ್‌ ಆರೋಪ ಮಾಡಿ ಕೇಸು ದಾಖಲಿಸಿದ್ದಾರೆ.

ಏನಿದು ಲವ್ವಿಡವ್ವಿ..?  

ಪ್ರೊ. ರಂಗನಾಥ್‌ ಮೈಸೂರಿನಲ್ಲಿ ಲೆಕ್ಚರರ್‌ ಆಗಿದ್ದರೆ ಯುವತಿ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ. ಅವನಿಗೆ 42 ಅವಳಿಗೆ 24 ವಯಸ್ಸು.ಇವರಿಬ್ಬರೂ ಒಂದೂವರೆ ವರ್ಷದ ಹಿಂದೆ ಕಾಮನ್‌ ಫ್ರೆಂಡ್ಸ್‌ ಮೂಲಕ ಪರಿಚಯವಾದ ಯುವತಿ ಬಳಿಕ ರಂಗನಾಥ್‌ಗೆ ಕ್ಲೋಸ್‌ ಆಗಿದ್ದಳು ಎನ್ನಲಾಗಿದೆ. ಪ್ರೊ. ರಂಗನಾಥ್‌ಗೆ ಮದುವೆಯಾಗಿ ಮಕ್ಕಳಿದ್ದರೂ ಯುವತಿ ಜತೆ ಅನುರಕ್ತನಾಗಿದ್ದು ಮಾತ್ರವಲ್ಲ,ಆಕೆಯನ್ನು ಮೈಸೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ಧಾನೆ ಎನ್ನಲಾಗಿದೆ.

ಯುವತಿ ಕೊಟ್ಟ ದೂರಿನಲ್ಲಿ ಏನಿದೆ..?   
2022ರಲ್ಲಿ ಪಾರ್ಟಿಯೊಂದರಲ್ಲಿ ಪ್ರೊ. ರಂಗನಾಥ್‌ ಅವರು ಪರಿಚಯವಾಗಿದ್ದರು. ಬಳಿಕ ಆಗಾಗ ಕರೆ ಮಾಡುತ್ತಿದ್ದರು. ತಾನು ಮೈಸೂರಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. 2023ರ ಜನವರಿ 13ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ಬೆಂಗಳೂರಿನ ಒಂದು ಹೋಟೆಲ್‌ಗೆ ಕರೆಸಿಕೊಂಡು ಬಳಿಕ ಮೈಸೂರಿಗೆ ಕರೆದುಕೊಂಡು ಹೋದರು. ಅಲ್ಲಿ ರಾತ್ರಿ ತನ್ನ ಜತೆಗೇ ಇದ್ದು ದೈಹಿಕ ಸಂಪರ್ಕ ಬೆಳೆಸಿದರು. ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಅವರು ಬಳಿಕ ನನ್ನ ಜತೆ ಸರಿಯಾಗಿ ಮಾತನಾಡುತ್ತಿಲ್ಲ. ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ. ಮದುವೆಯಾಗು ಎಂದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಂಗಳೂರಿನ ವಿಜಯನಗರ ನಿವಾಸಿಯಾಗಿರುವ ಈ ಯುವತಿ ದೂರಿನಲ್ಲಿ ಹೇಳಿದ್ದಾರೆ.
ರಂಗನಾಥ್‌ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ಐಆರ್‌ ದಾಖಲಾಗಿದೆ.
ಹನಿಟ್ರ್ಯಾಪ್‌ ಆರೋಪ ಮಾಡಿದ ಪ್ರೊ. ರಂಗನಾಥ್‌
ಈ ನಡುವೆ ಪ್ರೊ. ರಂಗನಾಥ್‌ ಅವರು, ಮೂರು ದಿನಗಳ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ, ಹನಿ ಟ್ರ್ಯಾಪ್‌ಗೆ ಪ್ರಯತ್ನಿಸುತ್ತಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾರೆ. ಒಂದುವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಯುವತಿಯ ಪರಿಚಯವಾಗಿತ್ತು.
ಬಳಿಕ ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ವಿರೋಧಿಸಿದ್ದೆ. ಕಳೆದ ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಯುವತಿ ಬೆಂಗಳೂರಿನ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ನನ್ನನ್ನು ಭೇಟಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ. ಮೇಲ್ಜಾತಿಯವಳಾದ ನಾನು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿರುವ ನಿನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದರೂ ಆಗುವುದಿಲ್ಲವೇ ಎಂದು ಜಾತಿನಿಂದನೆಯನ್ನೂ ಮಾಡಿದ್ದಾಳೆ ಎಂದು ದೂರಿನಲ್ಲಿ ಪ್ರೊ. ರಂಗನಾಥ್‌ ಹೇಳಿದ್ದಾರೆ.
ನಾನು ಮತ್ತು ಅಕೆ ಜತೆಗಿರುವ ಚಿತ್ರಗಳನ್ನು, ಸಂಭಾಷಣೆಯ ಆಡಿಯೋಗಳನ್ನು ನನ್ನ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುವ ಜತೆಗೆ ಪದೇಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಬೆದರಿಕೆಗಳಿಗೆ ಹೆದರಿ ನನ್ನ ಖಾತೆಯಿಂದಲೇ 32,500 ರೂ. ವರ್ಗಾವಣೆ ಮಾಡಿದ್ದೇನೆ.

ಈ ನಡುವೆ, ಕಳೆದ ಅಕ್ಟೋಬರ್‌ 28ರಂದು ಯುವತಿಯು ಶ್ರೀನಿವಾಸ್‌ ಎಂಬ ವ್ಯಕ್ತಿಯನ್ನು ಮೈಸೂರಿಗೆ ಕಳುಹಿಸಿದ್ದು ಹೋಟೆಲ್‌ ಒಂದರಲ್ಲಿ ಮಾತುಕತೆ ನಡೆಸಲಾಯಿತು. ಆಗ ಆ ವ್ಯಕ್ತಿ 15 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಬಳಿಕ ಈ ಮೊತ್ತವನ್ನು 10 ಲಕ್ಷಕ್ಕೆ ಇಳಿಸಲಾಗಿತ್ತು. ಹೀಗೆ ಹಣಕ್ಕಾಗಿ ಬೇಡಿಕೆ, ಜಾತಿ ನಿಂದನೆ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಎಂದು ಪ್ರೊ. ರಂಗನಾಥ್‌ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರೊ. ರಂಗನಾಥ್‌ ನಿಗೂಢ ನಾಪತ್ತೆ
ಈ ನಡುವೆ, ಉಪನ್ಯಾಸಕ ಪ್ರೊ. ರಂಗನಾಥ್‌ ತಲೆಮರೆಸಿಕೊಂಡಿದ್ದಾರೆ. ಮನೆಗೂ ಬಾರದೆ ಅವರು ಎಲ್ಲಿ ಹೋಗಿದ್ದಾರೆ ಎನ್ನುವುದು ತಿಳಿದಿಲ್ಲ. ತಮ್ಮ ಬಂಧನವಾಗಬಹುದು ಎಂಬ ಭಯದಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

RELATED ARTICLES

Related Articles

TRENDING ARTICLES