ಬೆಂಗಳೂರು : ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಏನೇ ವ್ಯತ್ಯಾಸಗಳು ಆದರೂ ಒಂದಾಗಿ, ಹೊಂದಿಕೊಂಡು ಹೋಗುತ್ತೇವೆ. ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಕೆಲಸ ಮಾಡುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಯುವಕರಿಗೆ ಹೊಸ ಹುರುಪು ಮೂಡಿದೆ. ದೇವೇಗೌಡರ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ ಎಂದು ತಿಳಿಸಿದರು.
ವಿಜಯೇಂದ್ರ ಅಣ್ಣಗೆ ಅಧಿಕೃತವಾಗಿ ರಾಜ್ಯಾಧ್ಯಕ್ಷರಾಗಿ ಘೋಷಣೆಗೆ ಮಾಡಿದ್ದಾರೆ. ಇದರಿಂದ ಇಡೀ ರಾಜ್ಯದ ಯುವಕರಲ್ಲಿ ಸಂಚಲನ ಮೂಡಿಸಿದೆ. ಮುಂದಿನ ಚುನಾವಣೆಗೆ ಒಬ್ಬ ಡೈನಾಮಿಕ್ ಲೀಡರ್ ಬೇಕು ಎಂಬ ಭಾವನೆ ಕಾಡುತ್ತಿತ್ತು. ವಿಜಯೇಂದ್ರ ಅವರ ನೇಮಕದಿಂದ ಆ ಭಾವನೆಯಿಂದ ನಾವು ಹೊರಗೆ ಬಂದಿದ್ದೇವೆ. ಹೀಗಾಗಿ, ಅವರು ಇವತ್ತು ದೇವೇಗೌಡರನ್ನು ಭೇಟಿ ಮಾಡಿ ಸಣ್ಣಪುಟ್ಟ ಸಲಹೆ ಹಂಚಿಕೊಂಡಿದ್ದಾರೆ ಎಂದು ಹೇಳಿದರು.
ದೊಡ್ಡ ಮಟ್ಟದ ಹೋರಾಟ ಮಾಡ್ತೀವಿ
ಮುಂಬರುವ ಯಾವುದೇ ಚುನಾವಣೆಗಳಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಪ್ರಮಾಣ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಅಣ್ಣರ ಜೊತೆ ಸೇರಿಕೊಂಡು, ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವ ಕೆಲಸ ಮಾಡ್ತೀವಿ. ಮತ್ತೊಮ್ಮೆ ದೇಶದಲ್ಲಿ ಮೋದಿ ಪ್ರಧಾನಿ ಆಗೋಕೆ ನಾವು ಬೆಂಬಲ ಕೊಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಪುನರುಚ್ಚರಿಸಿದರು.
24 ಸೀಟು ಗೆದ್ದೇ ಗೆಲ್ಲುತ್ತೇವೆ
ವಿಜಯೇಂದ್ರ ಅಣ್ಣ ನಾವು ಎಲ್ಲರೂ ಒಟ್ಟಾಗಿ ಹೋಗೋದ್ರಿಂದ ದೊಡ್ಡವರು ಹೇಳ್ತಿದ್ರು.. ವಿಜಯೇಂದ್ರಣ್ಣನವರು ಹೇಳ್ತಿದ್ರು.. ಕನಿಷ್ಠ 22 ರಿಂದ 24 ಸೀಟು ಗೆದ್ದೇ ಗೆಲ್ಲುತ್ತೇವೆ ಎಂದು ತೀರ್ಮಾನ ಮಾಡಿದ್ದೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.