Monday, January 20, 2025

ಕುಮಾರಸ್ವಾಮಿಗೆ ಜಾತಿ ಅಸ್ತ್ರ ಬಿಟ್ಟರೆ ಬೇರೆ ಏನೂ ಇಲ್ಲ : ದಿನೇಶ್ ಗುಂಡೂರಾವ್ ವ್ಯಂಗ್ಯ

ಬೆಂಗಳೂರು : ಜೆಡಿಎಸ್ ಪಕ್ಷಕ್ಕೆ ಜಾತಿ ಅನಿವಾರ್ಯ. ಅದೇ ಕಾರಣಕ್ಕೆ ಜಾತಿಯನ್ನು ಮುಂದಿಟ್ಟುಕೊಂಡು ಹೋಗುತ್ತಿದೆ. ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿಗೆ ಜಾತಿ ಅಸ್ತ್ರ ಬಿಟ್ಟರೆ ಬೇರೆ ಏನೂ ಇಲ್ಲ. ಬಿಜೆಪಿಗೂ ಈಗ ಅದೇ ಪರಿಸ್ಥಿತಿ ಬಂದಂತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದರು.

ಬಿಜೆಪಿ, ಜೆಡಿಎಸ್​ನ ಲಿಂಗಾಯತ ಹಾಗೂ ಒಕ್ಕಲಿಗ ಕಾಂಬಿನೇಷನ್ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿಗರು ಜಾತಿ, ದುಡ್ಡಿನ ಬಲದಿಂದ ಗೆಲ್ಲಬಹುದೆಂದು ಅಂದುಕೊಂಡಿದ್ದಾರೆ ಎಂದು ಚಾಟಿ ಬೀಸಿದರು.

ನಮ್ಮ (ಕಾಂಗ್ರೆಸ್​) ಪಕ್ಷ ಎಂದೂ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳ ಜೊತೆಯೂ ಕಾಂಗ್ರೆಸ್ ಇದೆ. ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಕಾರಣ ಒಂದು ಸಮುದಾಯ ಪಕ್ಷದಿಂದ ದೂರ ಹೋಗೋದಿಲ್ಲ. ಇದರ ಭಯವೂ ನಮಗೆ ಇಲ್ಲ ಎಂದು ಕುಟುಕಿದರು.

ಡಿಕೆಶಿ ಪಕ್ಷದ ಅಧ್ಯಕ್ಷ, ಡಿಸಿಎಂ ಆಗಿದ್ದಾರೆ

ನಮ್ಮ ಪಕ್ಷದಲ್ಲೂ ಒಕ್ಕಲಿಗ, ಲಿಂಗಾಯತ ಸಮುದಾಯದವರು ಪ್ರಮುಖ ಸ್ಥಾನದಲ್ಲಿ ಇದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾರೆ, ಉಪಮುಖ್ಯಮಂತ್ರಿ ಆಗಿದ್ದಾರೆ. ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸಚಿವರಾಗಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.

ನಾವು JDS ಜೊತೆ ಹೋದಾಗ ಏನಾಯ್ತು?

ಈ ಹಿಂದೆ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದೆವು. ನಾವು ಜೆಡಿಎಸ್ ಜೊತೆ ಹೋದಾಗ ಏನಾಯ್ತು ಹೇಳಿ.. ಈಗ ಬಿಜೆಪಿ ಜೊತೆ ಜೆಡಿಎಸ್ ಹೋದರೆ ಏನಾಗಲಿದೆ ಅನ್ನೋದನ್ನ ಕಾದು ನೋಡಲಿ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಟಕ್ಕರ್ ನೀಡಿದರು.

RELATED ARTICLES

Related Articles

TRENDING ARTICLES