Monday, January 27, 2025

ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಬರ್ತ್ ಡೇ ಸಂಭ್ರಮ!

ಕಡಲ ತೀರದ ಮುತ್ತು, ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಬರ್ತ್ ಡೇ ಸಂಭ್ರಮ. 37ರ ಹರೆಯದಲ್ಲೂ ನಕ್ಷತ್ರದ ಹೊಳಪು, ದೇವಕನ್ಯೆಯ ಚೆಲುವು. ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದ ಸ್ವೀಟಿ, ಇದೀಗ ಒಂದಲ್ಲಾ ಎರಡೆರಡು ಸಿನಿಮಾಗಳ ಅಪ್ಡೇಟ್ಸ್ ಜೊತೆ ಐ ಆ್ಯಮ್ ಬ್ಯಾಕ್ ಅಂದಿದ್ದಾರೆ.

2002ರಲ್ಲಿ ನಿನಗಾಗಿ ಸಿನಿಮಾದಿಂದ ಸ್ಯಾಂಡಲ್​ವುಡ್​ಗೆ ನಟೀಮಣಿಯಾಗಿ ಪ್ರವೇಶಿಸಿದ ರಾಧಿಕಾ, ಬಹುಬೇಗ ಕನ್ನಡಿಗರ ದಿಲ್ ದೋಚಿದ್ರು. ತರಹೇವಾರಿ ಪಾತ್ರಗಳು, ಮನೋಜ್ಞ ಅಭಿನಯದಿಂದ ವ್ಹಾವ್ ಫೀಲ್ ಕೊಟ್ಟರು. ಪಕ್ಕದ ತಮಿಳು ಹಾಗೂ ತೆಲುಗು ಇಂಡಸ್ಟ್ರಿಗಳು ಕೂಡ ಈಕೆಗೆ ರೆಡ್ ಕಾರ್ಪೆಟ್ ಹಾಸಿದ್ದು ಗೊತ್ತೇಯಿದೆ. ಗ್ಲಾಮರ್, ಪ್ಯಾಥೋ, ಡಿ ಗ್ಲಾಮರ್ ಹೀಗೆ ಪಾಲಿಗೆ ಬಂದಂತಹ ಪಾತ್ರಗಳಿಗೆ ಜೀವ ತುಂಬೋ ಮೂಲಕ ಅದ್ಭುತ ನಟಿ ಅನಿಸಿಕೊಂಡರು.

ನಟನೆಯ ಜೊತೆಗೆ ನಿರ್ಮಾಪಕಿ ಆಗಿಯೂ ಸೈ ಅನಿಸಿಕೊಂಡ ಈಕೆ ಲಕ್ಕಿ ಪ್ರೊಡ್ಯೂಸರ್ ಅಂತಲೇ ಫೇಮಸ್ ಆದ್ರು. ನಂತ್ರ ರಾಧಿಕಾ ಕುಮಾರಸ್ವಾಮಿ ಆದ ಸ್ವೀಟಿ, ಫ್ಯಾಮಿಲಿಗೆ ಅಂತ ಕೊಂಚ ಟೈಂ ಮೀಸಲಿಟ್ಟರು. ಸದ್ಯ ಮುದ್ದಿನ ಮಗಳು ಶಮಿಕಾ ಹಾಗೂ ಸಹೋದರ ರವಿರಾಜ್ ಜೊತೆ ಹ್ಯಾಪಿ ಲೈಫ್ ಲೀಡ್ ಮಾಡ್ತಾ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಬರೋಬ್ಬರಿ ಎರಡು ಯಶಸ್ವಿ ದಶಕಗಳನ್ನ ಪೂರೈಸಿರೋ ಈಕೆ, ಇದೀಗ ತಮ್ಮ ಶಮಿಕಾ ಎಂಟರ್​ಪ್ರೈಸಸ್​ನಡಿ ನಟಿಸಿ, ನಿರ್ಮಿಸಿರೋ ಎರಡೆರಡು ಸಿನಿಮಾಗಳಿಂದ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ.

37ನೇ ವಸಂತಕ್ಕೆ ಕಾಲಿಟ್ಟಿರೋ ರಾಧಿಕಾ ಕುಮಾರಸ್ವಾಮಿ, ಡಾಲರ್ಸ್​ ಕಾಲನಿಯ ತಮ್ಮ ನಿವಾಸದ ಬಳಿ ರಾತ್ರಿಯಿಂದಲೇ ಅದ್ದೂರಿ ಸಂಭ್ರಮಾಚರಣೆಗೆ ನಾಂದಿ ಹಾಡಿದ್ದರು. ಅವ್ರ ಮನೆಯ ಹಾದಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವ್ರ ಹತ್ತಾರು ಫ್ಲೆಕ್ಸ್​​ಗಳು ರಾರಾಜಿಸಿದವು. ಬೀದಿ ದೀಪಗಳು, ಪಟಾಕಿ, ಮನೆಯ ಮುಂದೆ ಬೃಹತ್ ವೇದಿಕೆ ಸಜ್ಜಾಗಿತ್ತು. ಅದೇ ವೇದಿಕೆಯಲ್ಲಿ ದೂರದ ಊರುಗಳಿಂದ ಬಂದಂತಹ ಫ್ಯಾನ್ಸ್ ಹಾಗೂ ಹಿತೈಷಿಗಳ ಜೊತೆ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ್ರು ಸ್ವೀಟಿ ರಾಧಿಕಾ.

ಯೆಸ್.. ಇದೇ ಮೊದಲ ಬಾರಿ ಹೆಣ್ಣು ಅಘೋರಿ ಪಾತ್ರದಲ್ಲಿ ಕಾಣಸಿಗೋ ರಾಧಿಕಾ ಕುಮಾರಸ್ವಾಮಿ ಅವ್ರ ಬಹುನಿರೀಕ್ಷಿತ ಚಿತ್ರ ಭೈರಾದೇವಿಯ ಟೀಸರ್​ನ ಬರ್ತ್ ಡೇ ವಿಶೇಷ ಲಾಂಚ್ ಮಾಡಲಾಯ್ತು. ಶ್ರೀಜೈ ನಿರ್ದೇಶನದ ಹಾಗೂ ಸಹೋದರ ರವಿರಾಜ್ ನಿರ್ಮಾಣದ ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದು, ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಡಲಿದೆ. ಡಿಸೆಂಬರ್ ಅಥ್ವಾ ಜನವರಿಯಲ್ಲಿ ರಿಲೀಸ್ ಆಗಲಿದ್ದು, ಈ ಸಿನಿಮಾಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಅಂತಾರೆ ಸ್ವೀಟಿ.

ಇನ್ನು ಬರೋಬ್ಬರಿ ಏಳು ಭಾಷೆಯಲ್ಲಿ ತಯಾರಾಗ್ತಿರೋ ಅಜಾಗ್ರತ ಸಿನಿಮಾದ ಫಸ್ಟ್ ಲುಕ್ ಕೂಡ ಲಾಂಚ್ ಮಾಡಲಾಯ್ತು. ಶಶಿಧರ್ ನಿರ್ದೇಶನದ ಈ ಸಿನಿಮಾಗೆ ಒನ್ಸ್ ಅಗೈನ್ ರಾಧಿಕಾ ಅವ್ರ ಸಹೋದರ ರವಿರಾಜ್ ಬ್ಯಾಕ್​ಬೋನ್ ಆಗಿ ನಿಂತಿದ್ದು, ಈ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಅವ್ರ ದೊಡ್ಡ ಕನಸೊಂದು ನನಸಾಗ್ತಿದೆಯಂತೆ.

ಒಟ್ಟಾರೆ ಭೈರಾದೇವಿ ರಿಲೀಸ್ ಆದ ಬೆನ್ನಲ್ಲೇ ಅಜಾಗ್ರತ ಚಿತ್ರ ಕೂಡ ತೆರೆಗೆ ಬರಲಿದ್ದು, ಇದರಲ್ಲಿ ಸಿನಿಮಾ ನಟಿಯಾಗಿಯೇ ಗ್ಲಾಮರ್ ಝಲಕ್ ತೋರಲಿದ್ದಾರಂತೆ ಸ್ಯಾಂಡಲ್​ವುಡ್ ಬ್ಯೂಟಿ. ಅದೇನೇ ಇರಲಿ, ಅಪ್ಸರೆಯಂತಿರೋ ಈ ಚೆಲುವೆಗೆ ಹ್ಯಾಪಿ ಬರ್ತ್ ಡೇ ಹೇಳ್ತಾ, ಇವ್ರ ಬತ್ತಳಿಕೆಯಿಂದ ಮತ್ತಷ್ಟು ಮಗದಷ್ಟು ಸಿನಿಮಾಗಳು ಬೆಳ್ಳಿತೆರೆ ಬೆಳಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES