Wednesday, December 25, 2024

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಫುಲ್ ಆ್ಯಕ್ಟಿವ್ : ಅಪ್ಪನ ಹಾದಿಯಲ್ಲೇ BYV ಟೆಂಪಲ್ ರನ್

ತುಮಕೂರು : ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಇಂದು ಇಡೀ ದಿನ ಟೆಂಪಲ್ ರನ್ ಮಾಡಿದರು.

ಬಿ.ಎಸ್.ಯಡಿಯೂರಪ್ಪ ಅವರ ಕಿರಿಯ ಪುತ್ರ ಶಾಸಕ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಫುಲ್ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ತಂದೆಯ ಹಾದಿಯಲ್ಲೇ ಭಾನುವಾರ ಇಡೀ ದಿನ ಟೆಂಪಲ್ ರನ್ ಮುಂದುವರಿಸಿದರು. ತಮ್ಮ ಮನೆ ದೇವರು ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಯಡಿಯೂರು ಸಿದ್ದಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದರು.

ಇದೇ ವೇಳೆ ವಿಜಯೇಂದ್ರ ಅವರು ತುಮಕೂರಿನ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು. ಬಳಿಕ ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗಸ್ವಾಮೀಜಿಗಳ ಆರ್ಶೀವಾದ ಪಡೆದರು.

ತಂದೆ ಹಾದಿಯಲ್ಲೇ ನಾನು ಸಾಗುವೆ

ಈ ವೇಳೆ ಮಾತನಾಡಿದ ಅವರು, ಅಧಿಕಾರ ಸ್ವೀಕಾರ ಮಾಡುವ ಮುನ್ನ ಪರಮಪೂಜ್ಯರ ಆಶೀರ್ವಾದಕ್ಕೆ ಭೇಟಿ ನೀಡಿದ್ದೇನೆ. ನನ್ನ ತಂದೆಯವರು ಯಾವುದೇ ಜವಾಬ್ದಾರಿ, ನಿರ್ಧಾರ ತೆಗೆದುಕೊಳ್ಳುವಾಗ ಶ್ರೀ ಸಿದ್ಧಗಂಗೆಯ ನಡೆದಾಡುವ ದೇವರ ಆಶೀರ್ವಾದ ಪಡೆಯುತ್ತಿದ್ದರು. ಅವರ ಹಾದಿಯಲ್ಲೇ ನಾನು ಕೂಡ ಆಶೀರ್ವಾದ ಪಡೆದಿದ್ದೇನೆ ಎಂದರು.

ಹೋದಲ್ಲೆಲ್ಲಾ ಭಾರಿ ಜನ ಬೆಂ’ಬಲ’

ಇನ್ನೂ ಟೆಂಪಲ್ ರನ್ ವೇಳೆ ಬಿ.ವೈ. ವಿಜಯೇಂದ್ರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಬಿ.ವೈ. ವಿಜಯೇಂದ್ರ ಎಂಬ ಘೋಷಣೆ ಕೂಗಿದರು. ಕೇಂದ್ರಕ್ಕೆ ನರೇಂದ್ರ ರಾಜ್ಯಕ್ಕೆ ವಿಜಯೇಂದ್ರ ಎಂಬ ಘೋಷಣೆ ಕೂಗಿದರು.

ಶಕ್ತಿ ಪ್ರದರ್ಶನಕ್ಕೆ ವಿಜಯೇಂದ್ರ ಸಜ್ಜು

ಇದೇ ವೇಳೆ ಮಾತನಾಡಿದ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ, ಬಿ.ಎಲ್ ಸಂತೋಷ್ ಜೊತೆ ಚರ್ಚಿಸಿ ತೀರ್ಮಾನಿಸಿದ್ದಾರೆ. ನ.15 ರಂದು ಜಗನ್ನಾಥ ಭವನದಲ್ಲಿ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡ್ತಾ ಇದ್ದೀನಿ. ಇದೇ ತಿಂಗಳ 16 ರಂದು ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಭೆ ಸಹ ನಡೆಸಲಾಗುವುದು. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದರು.

ಒಟ್ಟಾರೆ, ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿ ರಾಜ್ಯಾಧ್ಯಕ್ಷನ ಬದಲಾವಣೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಸದ್ಯ ಯುವ ರಾಜ್ಯಾಧ್ಯಕ್ಷರು ಪಟ್ಟಾಭಿಷೇಕಕ್ಕೆ ವಿಶೇಷ ತಯಾರಿ ನಡೆಸುತ್ತಿದ್ದು, ಇಡೀ ದಿನ ಟೆಂಪಲ್ ರನ್‌ನಲ್ಲಿ ಬಿಜಿಯಾಗಿದ್ದರು. ಬೆಂಗಳೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮೂಲಕ ಹೈಕಮಾಂಡ್‌ ನಾಯಕರು ಹಾಗೂ ಬಿಜೆಪಿಯೊಳಗಿನ ತಮ್ಮ ವಿರೋಧಿಗಳಿಗೆ ಸಂದೇಶ ರವಾನಿಸಲು ವಿಜಯೇಂದ್ರ ಸಜ್ಜಾಗಿದ್ದಾರೆ.

RELATED ARTICLES

Related Articles

TRENDING ARTICLES