Wednesday, January 22, 2025

ಸತಾಯಿಸುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ : ಸಿದ್ದರಾಮಯ್ಯ ವಾರ್ನಿಂಗ್

ಹಾಸನ : ಅನಗತ್ಯವಾಗಿ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ, ಕಠಿಣ ಕ್ರಮ ನಿಶ್ಚಿತ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.

ಹಾಸನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವರು ಸಲಹೆ ಸೂಚನೆಗಳನ್ನು ನೀಡಿದರು.

ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಲುಪಿಸಬೇಕು. ಜನರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸುವುದು ಭ್ರಷ್ಟಾಚಾರ. ಇದನ್ನು ಯಾವ ಅಧಿಕಾರಿ ಮಾಡಿದರೂ ಸಹಿಸುವುದಿಲ್ಲ. ಜನರಿಗೆ ಅಧಿಕಾರಿಗಳ ಅನುಕಂಪ ಬೇಕಾಗಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸಾಕು. ಅಧಿಕಾರಿಗಳು ಮತ್ತು ನಾವು ಜನರ ಸೇವಕರು. ಜನರೇ ನಮ್ಮ ಮಾಲೀಕರು. ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಸಹಿಸುವುದಿಲ್ಲ ಎಂದು ವಾರ್ನಿಂಗ್ ನೀಡಿದರು.

ಗ್ಯಾರಂಟಿ ಯೋಜನೆ ತಲುಪದಿರಲು ಯಾರು ಹೊಣೆ?

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಬೇಕು. ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯ ಸಾಧನೆ ಶೇ.100 ರಷ್ಟು ಸಾಧಿಸಬೇಕು. ಆದರೆ, ಹಾಸನ ಜಿಲ್ಲೆಯಲ್ಲಿ ಇನ್ನೂ ಶೇ.90 ರಷ್ಟಕ್ಕೆ ನಿಂತಿದೆ. ಇದನ್ನು ಶೇ. 100ರಷ್ಟು ಪೂರೈಸಬೇಕು. ನೋಂದಣಿ ಮಾಡಿಸಿರುವ ಪ್ರತಿಯೊಬ್ಬರಿಗೂ ಗ್ಯಾರಂಟಿ ಸ್ಕೀಂಗಳು ತಲುಪಬೇಕು. ಹಾಸನ, ಅರಸೀಕರೆ, ಅರಕಲಗೂಡು ತಾಲ್ಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳು ಶೇ. 90 ರಷ್ಟನ್ನೂ ತಲುಪದೆ ಇರಲು ಯಾರು ಹೊಣೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರಿನವರೆಗೂ ಬರುವ ಪರಿಸ್ಥಿತಿ ಬೇಡ

ಜನರಿಂದ ಅರ್ಜಿ ಸ್ವೀಕರಿಸಿದರೆ ಸ್ವೀಕೃತಿ ಪತ್ರ ಕಡ್ಡಾಯವಾಗಿ ನೀಡಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗಾಗಿ ನಮ್ಮ ಜನರು ಬೆಂಗಳೂರಿನವರೆಗೂ ನನ್ನನ್ನು ಹುಡುಕಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸ್ಥಳೀಯ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಬೇಕು. ರೈತರು ಮತ್ತು ಶ್ರಮಿಕರ ಸಮಸ್ಯೆಗಳು ಬಹುತೇಕ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.

RELATED ARTICLES

Related Articles

TRENDING ARTICLES