ಹಾಸನ: ಹಾಸನಾಂಬೆಯ (Hassanamba) ಸಾರ್ವಜನಿಕ ದರ್ಶನೊತ್ಸವ ಇಂದಿನಿಂದ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ವ್ಹೀಲ್ ಚೇರ್ ನಲ್ಲಿ ಬಂದು ತಾಯಿ ದರ್ಶನ ಪಡೆದಿದ್ದಾರೆ.
ಮೊದಲ ದಿನವೇ ಮಾಜಿ ಪ್ರದಾನಿ ಹೆಚ್ ಡಿ ದೇವೇಗೌಡ ( HD Devegowda) ಅವರು ಪತ್ನಿ ಚನ್ನಮ್ಮ ಹಾಗೂ ಪುತ್ರಿಯರ ಜೊತೆ ಹಾಸನಾಂಬೆ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಾಸನಾಂಬೆ ತಾಯಿ ದರ್ಶನಕ್ಕೆ ಪ್ರತೀವರ್ಷ ಕುಟುಂಬ ಸಮೇತ ಬರುತ್ತೇನೆ. ದೇವಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾರೆ.
ದೇವಿಯ ಗರ್ಭಗುಡಿಯೊಳಗೆ ಹಚ್ಚಿಟ್ಟ ದೀಪ ವರ್ಷ ಆದರು ಆರುವುದಿಲ್ಲ. ಒಂದು ವರ್ಷ ಆನಂದವಾಗಿ ಉರಿಯುತ್ತೆ ಇದು ಇತಿಹಾಸ. ಉತ್ತರದಲ್ಲಿ ವೈಷ್ಣವಿ ಇದೇ ಸ್ವರೂಪದ ದೇವರು ಎಂದರು.
ಜಿಲ್ಲಾಡಳಿತವನ್ನ ಹಾಡಿ ಹೊಗಳಿದ ದೇವೇಗೌಡ
ಜಿಲ್ಲಾಧಿಕಾರಿ ವರ್ಗ ಹಾಸನಾಂಬೆ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿಂದೆಂದೂ ಇಷ್ಟೊಂದು ವಿಜೃಂಭಣೆಯ ದೀಪಾಲಂಕಾರ ನಾನು ನೋಡಿರಲಿಲ್ಲ. ವಿದ್ಯುತ್ ದೀಪಾಲಂಕಾರ ಸೊಗಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಎಲ್ಲರ ಸಹಕಾರದಿಂದ ಉತ್ತಮವಾಗಿ ಆಯೋಜನೆ ಮಾಡಿದ್ದಾರೆ.
ಇನ್ನೂ ಆರೋಗ್ಯ ಕೊಡು ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಮುಂದಿನಬಾರಿ ಆ ತಾಯಿ ದರ್ಶನಕ್ಕೆ ನಡೆದುಕೊಂಡು ಬರುವಷ್ಟು ಶಕ್ತಿ ನೀಡಲಿ. ದೇವೇಗೌಡರಕ್ಕಿಂತ ಮುಂಚೆ ಪುತ್ರ, ಮಾಜಿ ಸಚಿವ ಹೆಚ್ಡಿ ರೇವಣ್ಣ ಬೆಳ್ಳಂಬೆಳಿಗ್ಗೆ ಹಾಸನಾಂಬೆ ದರ್ಶನ ಪಡೆದರು.
ಇಂದಿನಿಂದ 12 ದಿನಗಳ ಕಾಲ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ದೇವಿಯ ದರ್ಶನ ಪಡೆಯಲು ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.