Monday, December 23, 2024

ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ : ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಿತಿಮೀರಿದೆ. ಈ ಹಿಂದೆಂದೂ ಕಂಡು ಕೇಳರಿಯದಷ್ಟು ಹೊಗೆ ಮಾಲಿನ್ಯ ಸೃಷ್ಟಿಯಾಗಿದೆ.

ದೆಹಲಿಯ ಆನಂದ ವಿಹಾರ್‌ ಮತ್ತು ಆರ್.ಕೆ.ಪುರಂ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ ನಂಬಲು ಸಾಧ್ಯವಾಗದ 999 ಅಂಕಗಳಿಗೆ ಕುಸಿತವಾಗಿದೆ. ಅಲ್ಲದೆ, ಇಡೀ ನಗರದ ಸರಾಸರಿ ಸೂಚ್ಯಂಕವು ಅತಿ ಕಳಪೆ ಮಟ್ಟಕ್ಕೆ ಕುಸಿದಿದ್ದು, ಜನರು ಭಯದಿಂದ ಬದುಕಬೇಕಾದ ವಿಷಮ ಸ್ಥಿತಿ ಉದ್ಭವಿಸಿದೆ.

ನಗರದಲ್ಲಿ ಹದಗೆಡುತ್ತಿರುವ ವಾಯುಮಾಲಿನ್ಯ ಸೂಚ್ಯಂಕದ ಹಿನ್ನೆಲೆಯಲ್ಲಿ ಗುರುಗ್ರಾಮ್‌ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಶ್ವಾಸಕೋಶಕ್ಕೆ ಹಾನಿಕರವಾದ ಸೂಕ್ಷ್ಮ ಕಣಗಳ ಪ್ರಮಾಣ ಅಧಿಕವಾಗಿದ್ದು, ಇದರಿಂದ ಉಸಿರಾಟದ ಸಮಸ್ಯೆ, ನೆಗಡಿ, ಕೆಮ್ಮು, ಶ್ವಾಸಕೋಶದ ಸೋಂಕು ಉಂಟಾಗಬಹುದು. ಹೀಗಾಗಿ, ಮನೆಯಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಬಳಕೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ವಾಯು ತುರ್ತುಸ್ಥಿತಿಯನ್ನು ಘೋಷಿಸಲಾಗಿತ್ತು. ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಶುಕ್ರವಾರದಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕ ರಜೆ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಸರ್ಕಾರವು ಅನಿವಾರ್ಯವಲ್ಲದ ನಿರ್ಮಾಣ ಚಟುವಟಿಕೆಗಳ ಮೇಲೆ ಮತ್ತು ದೆಹಲಿ ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಷೇಧ ಹೇರಿದೆ.

ಮೆಟ್ರೋ, 20 ಹೆಚ್ಚುವರಿ ರೈಲು ಓಡಾಟ

ಇನ್ನೂ, ರಸ್ತೆ ಸ್ವಚ್ಛತೆ ವೇಳೆ ಏಳುವ ಧೂಳಿನ ಕಣಗಳ ನಿಯಂತ್ರಣಕ್ಕೆ ಸರ್ಕಾರ, ರಸ್ತೆಗಳ ಮೇಲೆ ಮೊದಲು ನೀರು ಸಿಂಪಡಿಸಿ  ಬಳಿಕ ರಸ್ತೆ ಸ್ವಚ್ಛ ಮಾಡುವ ಕಾರ್ಯ ಮಾಡ್ತಿದೆ. ಇದರಿಂದ ಧೂಳಿನ ಕಣಗಳು ಏಳದಂತೆ ಎಚ್ಚರವಹಿಸಲಾಗ್ತಿದೆ. ಸರ್ಕಾರವು ರಸ್ತೆಗಳ ಯಾಂತ್ರೀಕೃತ ಗುಡಿಸುವ ಯಂತ್ರಗಳನ್ನು ಹೆಚ್ಚಿಸಲಿದೆ ಎಂದು ಮಾಹಿತಿ ನೀಡಿದೆ. ಜೊತೆಗೆ, ಜನರು ತಮ್ಮ ವಾಹನಗಳನ್ನು ಬಿಟ್ಟು ಸರ್ಕಾರಿ ಅಥವಾ ಸಾಮೂಹಿಕ ಸಾರಿಗೆಗಳನ್ನು ಹೆಚ್ಚು ಬಳಸಲು ಮನವಿ ಮಾಡಿದೆ. ಇದರ ಜೊತೆಗೆ ದೆಹಲಿ ಮೆಟ್ರೋ, 20 ಹೆಚ್ಚುವರಿ ರೈಲು ಓಡಾಟ ಆರಂಭಿಸಿದೆ. ಇದರಿಂದ ಜನರು ಮೆಟ್ರೋವನ್ನು ಬಳಸಲು ಹೆಚ್ಚು ಪ್ರೋತ್ಸಾಹ ನೀಡಿದಂತಾಗಿದೆ.

RELATED ARTICLES

Related Articles

TRENDING ARTICLES