ನವದೆಹಲಿ : ಬಿಜೆಪಿ ಕೇಂದ್ರ ಕಚೇರಿಯಿಂದ ನಮ್ಮ ಮೂವರಿಗೆ ಕರೆ ಬಂದಿತ್ತು, ಹಾಗಾಗಿ ಇಂದು ದೆಹಲಿಗೆ ಒಟ್ಟಿಗೆ ಬಂದಿದ್ದೇವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ವಿಚಾರ ಅನ್ನೋದು ಸಭೆ ಬಳಿಕ ಎಲ್ಲಾ ವಿಚಾರವೂ ಗೊತ್ತಾಗುತ್ತೆ. ಅಸಮಾಧಾನ ಬಿಜೆಪಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಆಯ್ಕೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಗೆ ನಾಲ್ಕು ವರ್ಷ ಅಧ್ಯಕ್ಷರಿರಲಿಲ್ಲ. ಈಗ ವಿಧಾನಸಭೆ ಚುನಾವಣೆ ನಡೆದು ನಾಲ್ಕು ತಿಂಗಳು ಆಗಿಲ್ಲ. ರಾಷ್ಟ್ರೀಯ ನಾಯಕರು ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಮಾಡ್ತಾರೆ. ಅಧ್ಯಕ್ಷ ಸ್ಥಾನ ಖಾಲಿ ಇಲ್ಲ, ವಿಪಕ್ಷ ಸ್ಥಾನ ತುಂಬುತ್ತಾರೆ. ವಿಳಂಬ ಆಗಿರುವುದರಿಂದ ಪಕ್ಷಕ್ಕೆ ಮುಜುಗರ ಆಗಿದೆ ಅನ್ನೋದನ್ನು ಒಪ್ಪಿಕೊಳ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕನ ನೇಮಕವಾಗಿಲ್ಲದಿರುವುದು ಮತ್ತು ರಾಜ್ಯ ಬಿಜೆಪಿ ನಾಯಕರನ್ನು ದೆಹಲಿ ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳ ಮಧ್ಯೆಯೇ ಮೂವರು ನಾಯಕರನ್ನು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ ಮೋಹನ್ ಅವರಿಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿತ್ತು. ಇದರಂತೆ ಈ ಮೂವರು ನಾಯಕರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.