Tuesday, January 7, 2025

ಅಯ್ಯರ್, ಗಿಲ್, ವಿರಾಟ್ ಅಬ್ಬರ : ಶ್ರೀಲಂಕಾಗೆ 358 ರನ್​ಗಳ ಬೃಹತ್ ಟಾರ್ಗೆಟ್

ಬೆಂಗಳೂರು : ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್​ ಕಲೆಹಾಕಿದೆ. ಈ ಮೂಲಕ ಲಂಕಾಗೆ 358 ರನ್​ಗಳ ಬೃಹತ್ ಗುರಿ ನೀಡಿದೆ.

ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಕೇವಲ 4 ರನ್​ ಗಳಿಸಿ ಔಟಾದರು. ಬಳಿಕ, ಶುಭ್​ಮನ್​ ಗಿಲ್ ಜೊತೆಗೂಡಿದ ಕಿಂಗ್ ಕೊಹ್ಲಿ ಲಂಕಾ ಬೌಲರ್​ಗಳನ್ನು ಚಂಡಾಡಿದರು.

ಗಿಲ್ ಹಾಗೂ ಕೊಹ್ಲಿ ಬೊಂಬಾಟ್ ಆಟದ ಮೂಲಕ ಆಕರ್ಷಕ ಅರ್ಧಶತಕ ಪೂರೈಸಿದರು. ಈ ಪಂದ್ಯದಲ್ಲಿ ಬೊಂಬಾಟ್ ಫಾರ್ಮ್​ಗೆ ಮರಳಿದ ಗಿಲ್ ಕೇವಲ 8 ರನ್​ಗಳಿಂದ ಶತಕದಿಂದ ವಂಚಿತರಾದರು. 92 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿ ನೆರವಿನೊಂದಿಗೆ 92 ರನ್​ ಗಳಿಸಿದ್ದಾಗ ಮಧುಶಂಕ ಬೌಲಿಂಗ್​ನಲ್ಲಿ ಔಟಾದರು. ಈ ಮೂಲಕ ತಮ್ಮ 7ನೇ ಶತಕದ ಹೊಸ್ತಿಲಲ್ಲಿದ್ದ ಗಿಲ್​ ಸ್ವಲ್ಪದರಲ್ಲೇ ಶತಕ ಮಿಸ್​ ಮಾಡಿಕೊಂಡರು.

ಕಿಂಗ್ ಕೊಹ್ಲಿ ಇಂದು ಶತಕ ಸಿಡಿಸುತ್ತಾರೆ. ಸಚಿನ್ ಅವರ ಏಕದಿನ ಶತಕದ(49) ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಕೊಹ್ಲಿ ಶತಕದ ಸನಿಹದಲ್ಲಿ ಔಟಾದರು. 94 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನೊಂದಿಗೆ 88 ರನ್​ ಗಳಿಸಿದ್ದಾಗ ಮಧುಶಂಕ ಬೌಲಿಂಗ್​ನಲ್ಲಿ ಔಟಾದರು. ಈ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದರು.

ಅಯ್ಯರ್ ಸಿಡಿಲಬ್ಬರದ ಆಟ

ಇನ್ನೂ ಗಿಲ್ ಹಾಗೂ ಕೊಹ್ಲಿ ನಿರ್ಗಮನದ ಬಳಿಕ ಕ್ಲಾಸ್ ಪ್ಲೇಯರ್ ಶ್ರೇಯಸ್ ಅಯ್ಯರ್ ಬೊಂಬಾಟ್ ಆಟ ಪ್ರದರ್ಶಿಸಿದರು. 56 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 82 ರನ್​ ಗಳಿಸಿದರು. ಅಯ್ಯರ್ ಸಹ ಶತಕ ಸಿಡಿಸುವ ಚಾನ್ಸ್ ಮಿಸ್ ಮಾಡಿಕೊಂಡರು. ಉಳಿದಂತೆ ನಾಯಕ ರೋಹಿತ್ ಶರ್ಮಾ 4, ಕೆ.ಎಲ್ ರಾಹುಲ್ 21, ಸೂರ್ಯಕುಮಾರ್ 12, ಶಮಿ 2, ಬುಮ್ರಾ ಅಜೇಯ 1 ಹಾಗೂ ರವೀಂದ್ರ ಜಡೇಜಾ ಅಜೇಯ 35 ರನ್ ಗಳಿಸಿದರು.

ಭಾರತದ ಬ್ಯಾಟರ್​ಗಳಿಗೆ ಸಿಂಹಸ್ವಪ್ನದಂತೆ ಕಾಡಿದ ಶ್ರೀಲಂಕಾ ವೇಗಿ ಮಧುಶಂಕ 5 ವಿಕೆಟ್ ಪಡೆದು ಮಿಂಚಿದರು. ಶ್ರೀಲಂಕಾ ಗೆಲ್ಲಲು 358 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES