ಉಡುಪಿ : ಕರಾವಳಿಯಲ್ಲಿ ಧರ್ಮಸಂರಕ್ಷಣಾ ಯಾತ್ರೆಗೆ ಇಂದು ಚಾಲನೆ ಸಿಕ್ಕಿದೆ. ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನದ ವಿರುದ್ದ ನಡೆದ ರಥಯಾತ್ರೆಗೆ ಭವ್ಯ ಸ್ವಾಗತ ದೊರೆತಿದೆ. ದಾರಿಯುದ್ದಕ್ಕೂ ಗಣ್ಯರು ರಥಯಾತ್ರೆಗೆ ಭರ್ಜರಿಯಾಗಿ ಸ್ವಾಗತಿಸಿದರು.
ಅಧರ್ಮಿಗಳ ವಿರುದ್ದ ಧರ್ಮ ಸಂರಕ್ಷಣಾ ಸಮಾವೇಶ ಈ ಹಿಂದೆ ನಡೆದಿತ್ತು. ಇದೀಗ ಶನಿವಾರ ಧರ್ಮಸಂರಕ್ಷಣಾ ರಥಯಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ದಕ್ಷಿಣ ಭಾರತದ ಮಹಾನ್ ಶಕ್ತಿ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಮುಖಂಡರಾದ ಅಪ್ಪಣ್ಣ ಹೆಗ್ಗಡೆಯವರು ರಥಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ವಿವಿಧ ಭಜನಾ ತಂಡದಿಂದ ಕೊಲ್ಲೂರಿನಲ್ಲಿ ಭಜನಾ ಕುಣಿತ ರಥಯಾತ್ರೆಗೆ ಮತ್ತಷ್ಟು ಮೆರೆಗು ನೀಡಿತು.
ಕೊಲ್ಲೂರಿನಿಂದ ಹೊರಟ ರಥಯಾತ್ರೆ ಬೈಂದೂರು ತಾಲೂಕಿನ ಚಿತ್ತೂರಿಗೆ ಬಂದು ತಲುಪಿತು. ಅಲ್ಲಿನ ಸಾರ್ವಜನಿಕರು ರಥಯಾತ್ರೆಯನ್ನ ಭರ್ಜರಿಯಾಗಿ ಸ್ವಾಗತಿಸಿದರು. ತಲ್ಲೂರಿನಲ್ಲೂ ಪುಷ್ಪಾರ್ಚನೆ ಮೂಲಕ ಧರ್ಮರಥಕ್ಕೆ ಪೂಜೆಯನ್ನ ನೆರವೇರಿಸಿದರು. ಇದೇ ವೇಳೆ ಕುಂಬಾಶಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಥಕ್ಕೆ ಸ್ವಾಗತಕೋರಿ ರಥಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉಪಸ್ಥಿತರಿದ್ದರು.
ಸಾವಿರಾರು ಭಕ್ತರು ಪಾದಯಾತ್ರೆ ಭಾಗಿ
ಹಾಗೆಯೇ ಸಾಲಿಗ್ರಾಮದಲ್ಲೂ ದೇವಸ್ಥಾನದ ಮುಂಭಾಗ ಭವ್ಯವಾಗಿ ರಥಯಾತ್ರೆಯನ್ನು ಸ್ವಾಗಸಲಾಯ್ತು. ಉದ್ಯಮಿ ಆನಂದ್.ಸಿ. ಕುಂದರ್ ಅವರು ಇಲ್ಲಿ ರಥವನ್ನು ಸ್ವಾಗತಿಸಿದರು. ರಥಯಾತ್ರೆ ಉಚ್ಚಿಲ, ಪಡುಬಿದ್ರಿನಿಂದ ಹಾದುಹೋಗಿ ಶನಿವಾರ ಕದ್ರಿ ಮಂಜುನಾಥನ ಸನ್ನಿಧಿ ತಲುಪಲಿದೆ. ಸದ್ಯ ಭಾನುವಾರ ಬೆಳಿಗ್ಗೆ ಕದ್ರಿಯಿಂದ ಉಜಿರೆವರೆಗೂ ರಥಯಾತ್ರೆ ಮುಂದುವರಿಯಲಿದೆ. ಹಾಗೆಯೇ ಉಜಿರೆಯಿಂದ ಧರ್ಮಸ್ಥಳದವರೆಗೂ ಸಾವಿರಾರು ಜನ ಭಕ್ತರು ಧರ್ಮಸಂರಕ್ಷಣಾ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.