Sunday, December 22, 2024

ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ: HDK

ಬೆಂಗಳೂರು: ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಡಿಸಿಎಂ ಹೇಳಿಕೆ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಜನ್ಮವಷ್ಟೇ ಅಲ್ಲ, ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ. ಇದನ್ನು ಡಿ.ಕೆ.ಶಿವಕುಮಾರ್‌ ಅರಿತುಕೊಳ್ಳಬೇಕು. ಜನರ ಅನುಕೂಲ, ಅನನುಕೂಲಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಶೀಲಿಸಿ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ. ಈಗ ಜಿಲ್ಲೆ ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಇಡೀ ಜಿಲ್ಲೆಯ ಜನ ತಿರುಗಿಬೀಳುತ್ತಾರೆ, ಜೋಕೆ. ಒಡೆದು ಚೂರುಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ? ಎಂದು ಕಿಡಿಕಾರಿದ್ದಾರೆ.

“ಈ‌ ದೇಶಕ್ಕೆ ವಿದ್ಯಾವಂತರು ಅಲ್ಲದಿದ್ದರೂ, ಬುದ್ದಿವಂತರು ಅಲ್ಲದಿದ್ದರೂ ಪ್ರಜ್ಞಾವಂತರು ಬೇಕು. ನಾನು ಕುಮಾರಸ್ವಾಮಿ ಅವರನ್ನು ಪ್ರಜ್ಞಾವಂತರು ಅಂದುಕೊಂಡಿದ್ದೆ. ಅವರ ತಂದೆಯವರನ್ನು ಕೇಳಿ ತಿಳಿದುಕೊಳ್ಳಬೇಕು” ಎಂದು ದರ್ಪದ ಮಾತು ಹೇಳಿದ್ದಾರೆ ಡಿಸಿಎಂ. ವಿದ್ಯೆ, ಬುದ್ಧಿ ಇಲ್ಲದಿದ್ದರೆ ಪ್ರಜ್ಞಾವಂತರು ಹೇಗಾದಾರು? ಎನ್ನುವ ಸಾಮಾನ್ಯ ಜ್ಞಾನ ಅವರಿಗಿಲ್ಲ. ಅವರ ಪ್ರಜ್ಞಾವಂತಿಕೆ ಎಂಥಹುದು ಎಂಬುದು ಜನಜನಿತ! ಎಂದು ಹೇಳಿರುವ ಮಾಜಿ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ

ಮುಖ್ಯಮಂತ್ರಿಗಳು; ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ನನ್ನ ತಲೆಯಲ್ಲಿ ಏನೋ ಯೋಚನೆ ಇದೆ ಎನ್ನುತ್ತಾರೆ ಡಿಸಿಎಂ. ಇಷ್ಟಕ್ಕೂ ಅವರ ತಲೆಯಲ್ಲಿ ಏನಿದೆ? ಚಿನ್ನದ ಬೆಲೆಯ ಕನಕಪುರದ ಭೂಮಿಗಳನ್ನು ಕೊಳ್ಳೆ ಹೊಡೆದು ಬಿಲ್ಡರುಗಳಿಗೆ ಒಪ್ಪಿಸುವುದೇ? ಅಥವಾ ತಾವು ಈಗಾಗಲೇ ಎಗ್ಗಿಲ್ಲದೆ ಬೇಲಿ ಹಾಕಿಕೊಂಡಿರುವ ಬೇನಾಮಿ ಭೂಮಿಗಳಲ್ಲಿ ಕೋಟೆ ಕಟ್ಟಿಕೊಳ್ಳುವುದೇ? ಬಿಡಿಸಿ ಹೇಳಿದರೆ ನಾವು ಕೃತಾರ್ಥರಾಗುತ್ತೇವೆ. ಇವರು ಹೇಳಲ್ಲ, ಜನರೂ ನಂಬಲ್ಲ. ಎಲ್ಲವೂ ನಿಗೂಢ! ಎಂದು ಡಿಕೆಶಿಗೆ ಟಾಂಗ್‌ ಕೊಟ್ಟಿದ್ದಾರೆ ಕುಮಾರಸ್ವಾಮಿ.

ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ಕೊಪ್ಪಳ, ಗದಗ ಸೇರಿ ಅನೇಕ ಹೊಸ ಜಿಲ್ಲೆಗಳು ರಚನೆ ಆಗಿವೆ. ಅವೆಲ್ಲವನ್ನೂ ಸುಖಾಸುಮ್ಮನೆ ಮಾಡಲಾಯಿತೆ? ಜನಹಿತ ಪರಿಗಣಿಸಿ ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಅಲ್ಲಿ ಜಿಲ್ಲೆಗಳನ್ನು ರಚನೆ ಮಾಡಿದ ಮುಖ್ಯಮಂತ್ರಿಯ ಸ್ವಹಿತ ಇರಲಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಯಾರ ಹಿತ ಅಡಗಿದೆ? ಕನಕಪುರದ ಪ್ರತಿಯೊಬ್ಬರಿಗೂ ಅಸಲಿ ಸತ್ಯ ಗೊತ್ತಿದೆ. ಇರುವ ಶ್ರೀಮಂತಿಕೆ, ಸಂಪತ್ತು ಸಾಲದೆ? ಇನ್ನೆಷ್ಟನ್ನು ಕೂಡಿ ಹಾಕಬೇಕು? ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.

1983ಕ್ಕೆ ಮೊದಲು ಸ್ಥಿತಿ ಹೇಗಿತ್ತು? :

ಕನಕಪುರದ ಅಭಿವೃದ್ಧಿ ಈಗ ನೆನಪಾಗಿದೆಯಾ? 1983ಕ್ಕೆ ಮೊದಲು ಇದೇ ಕನಕಪುರ, ಸಾತನೂರು ಹೇಗಿದ್ದವು? ರಾಮಕೃಷ್ಣ ಹೆಗಡೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಂದ ದೇವೇಗೌಡರಿಗೆ ಅಲ್ಲಿನ ಸ್ಥಿತಿ ಕಂಡು ಕಣ್ಣೀರು ಬಂತು. ಒಂದು ವಿದ್ಯುತ್‌ ಸಂಪರ್ಕ ಇರಲಿಲ್ಲ, ರಸ್ತೆ-ಚರಂಡಿ ಇರಲಿಲ್ಲ. ಕುಡಿಯಲು ನೀರು ಇರಲಿಲ್ಲ. ಆ ಪರಿಸ್ಥಿತಿಯನ್ನು ದೇವೇಗೌಡರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅಂದು ಲೋಕೋಪಯೋಗಿ, ಬೃಹತ್‌ ನೀರಾವರಿ ಮಂತ್ರಿಗಳಾಗಿದ್ದ ಅವರು ಕನಕಪುರ, ರಾಮನಗರಕ್ಕೆ ಕಾಯಕಲ್ಪ ನೀಡಿದರು, ಆ ದುಸ್ಥಿತಿಯನ್ನು ಬದಲಿಸಿದರು. ಅವರ ಕೆಲಸವನ್ನೇ ನಾನೂ ಮುಂದುವರಿಸಿದೆ. ನೀವೇನು ಮಾಡಿದ್ದೀರಿ ಡಿ.ಕೆ.ಶಿವಕುಮಾರ್‌ ರವರೇ..? ಬಡವರ ಜಮೀನಿಗೆ ಬೇಲಿ ಹಾಕಿದ್ದು, ಅಡ್ಡ ಬಂದವರ ಜೀವ ತೆಗೆದದ್ದು, ಕಲ್ಲುಬಂಡೆಗಳನ್ನು ಲೂಟಿ ಮಾಡಿದ್ದು, ಕನಕಪುರದಲ್ಲಿ ದಾದಾಗಿರಿ, ಗೂಂಡಾಗಿರಿ ಮಾಡಿದ್ದು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಇನ್ನೊಂದು ಮಾಫಿಯಾ ಕಟ್ಟುವುದಾ? ಇದಾ ನಿಮ್ಮ ತಲೆಯಲ್ಲಿ ಇರುವ ಆಲೋಚನೆ? ಎಂದು ಅವರು ಕಿಡಿಕಾರಿದ್ದಾರೆ.

ಶ್ರೀಗಳ ಹೆಸರು ಹೇಳುವ ನೈತಿಕತೆ ಇಲ್ಲ : 

ನಾಡಪ್ರಭು ಕೆಂಪೇಗೌಡರು, ಕೆಂಗಲ್‌ ಹನುಮಂತಯ್ಯನವರು, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು, ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ರಾಮನಗರದವರು ಎಂದು ನಿಮಗೆ ಈಗ ಜ್ಞಾನೋದಯ ಆಗಿದೆ. ಇಂಥ ಮಹಾಪುರುಷರು ಜನ್ಮತಳೆದ, ಅವರು ನಡೆದಾಡಿದ ನೆಲವನ್ನು ʼರಿಯಲ್‌ ಎಸ್ಟೇಟ್‌ ಪಾಪಕುಂಡʼವನ್ನಾಗಿ ಮಾಡಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್?‌ ಈ ಪುಣ್ಯಪರುಷರ ಹೆಸರು ಹೇಳುವ ನೈತಿಕತೆ ನಿಮಗೆ ಇದೆಯಾ? ರಾಮದೇವೇರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮಚಂದ್ರ ಪ್ರಭು ನಿಮ್ಮ ದುಷ್ಟ ಹುನ್ನಾರವನ್ನು ಮೆಚ್ಚಾನೆಯೇ? ಎಂದು ಅವರು ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES