ಚಾಮರಾಜನಗರ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಮಾರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಯಡವನಳ್ಳಿ ಗ್ರಾಮದ ವೈ.ಎಸ್.ಶಿವರಾಜು(45) ನೇಣು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತನ ಸಹೋದರ ಮಹೇಶ್ ಎಂಬವರು ಬೇಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ಧಾನ್ಯಗಳ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ!
ಘಟನೆ ಸಂಬಂಧ ಯಡವನಹಳ್ಳಿ ಗ್ರಾಮದ ಯಜಮಾನರಾದ ಕೃಷ್ಣ, ಚಂದು, ರೇವನಾಯಕ, ಸಂತೋಷ್, ಸಂದೇಶ್, ವೆಂಕಟರಮಣನಾಯಕ, ನಿಂಗನಾಯಕ, ಚಿಕ್ಕಬೆಳ್ಳನಾಯಕ, ಆಲತ್ತೂರು ಮಹದೇವನಾಯಕ, ಡಿ.ಮಹದೇವಮನಾಯಕ, ದೇವನಾಯಕ, ಚಿನ್ನಸ್ವಾಮಿ ನಾಯಕ, ರಂಗಸ್ವಾಮಿನಾಯಕ ಎಂಬ 13 ಮಂದಿ ವಿರುದ್ಧ ಬೇಗೂರು ಪೊಲೀಸರು FIR ದಾಖಲಿಸಿದ್ದಾರೆ.
ಪ್ರತಿಭಟನೆ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಮತ್ತು ಸಂಬಂಧಿಕರು ಬೇಗೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸುತ್ತೇವೆ, ತನಿಖೆ ಕೈಗೊಳ್ಳುತ್ತೇವೆ, ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು