ಬೆಂಗಳೂರು: 20ಕ್ಕೂ ಹೆಚ್ಚು ಶಾಸಕರೊಂದಿಗೆ ಮೈಸೂರು ದಸರಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಸತೀಶ್ ಜಾರಕಿಹೊಳಿ ಅವರ ನಡೆಗೆ ಕಾಂಗ್ರೆಸ್ ಹೈಕಮಾಂಡ್ ತಡೆ ಒಡ್ಡಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿ ಅವರು ತಾನು ಉಸ್ತುವಾರಿ ಹೊಂದಿರುವ ಜಿಲ್ಲೆಯ ಶಾಸಕರೊಂದಿಗೆ ಮೈಸೂರು ತೆರಳಲು ಚಿಂತನೆ ನಡೆಸಿದ್ದರು. ಶಾಸಕರನ್ನು ಕರೆದುಕೊಂಡು ಹೋಗಲು ಬಸ್ ಕೂಡಾ ಸಿದ್ಧವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಹೈಕಮಾಂಡ್, ಗುಂಪಾಗಿ ಹೋಗದಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್: ಬಿಜೆಪಿ ಪೋಸ್ಟರ್ ವೈರಲ್
ಬಸ್ನಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ. ಇದು ವಿರೋಧ ಪಕ್ಷಗಳಿಗೆ ಆಹಾರ ಕೊಟ್ಟಂತೆ ಆಗಲಿದೆ ಎಂದು ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುವುದನ್ನು ಸತೀಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ‘ಮೈಸೂರಿಗೆ ಹೋಗಬೇಕು ಎಂದು ಕೆಲವರು ಮಾತನಾಡಿದ್ದೆವು. ದಸರಾ ನೋಡಲು ಬನ್ನಿ ಎಂದು ಅಲ್ಲಿನ ಶಾಸಕರೂ ಹೇಳಿದ್ದರು. ಕೆಲವು ನಮ್ಮ ಸಮಾನಮನಸ್ಕ ಶಾಸಕರು ಹೋಗಬೇಕು ಅಂತ ಇತ್ತು. ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತ ಕೆಲವರು ಹೇಳಿದ್ದು’ ಎಂದರು.