ವಿಜಯಪುರ : ಅಕ್ಟೋಬರ್ 14ರಂದು ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ತೊರವಿ ತಾಂಡಾ 1ರಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಶ್ರೀ ಮರಿಯಮ್ಮದೇವಿ ಮತ್ತು ಶ್ರೀ ನಂದುಲಾಲ ಮಹಾರಾಜರ 15ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ಬಂಜಾರ ಧರ್ಮ ಗುರುಗಳ ಮಹಾಸಭಾದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷ ಡಾ. ಬಾಬುರಾಜೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಈ ಜಾತ್ರಾ ಮಹೋತ್ಸವದ ಉದ್ಘಾಟನೆಯನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಉದ್ಘಾಟಿಸಲಿದ್ದಾರೆ. ಸಚಿವರು, ಗಣ್ಯರು, ಪೂಜ್ಯರು ಈ ಮಹಾಸಭಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಕುಂಭಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ. ಇದೇ ವೇಳೆ ಮಾತನಾಡಿದ ಗೋಪಾಲ ಮಹಾರಾಜರು ಮತಾಂತರವನ್ನು ಸೇರಿದಂತೆ ತಾಂಡಾ ಜನರಲ್ಲಿ ಅರಿವು ಏಳ್ಗೆಗೋಸ್ಕರ ಸಂತರ ನಡೆ ತಾಂಡಾ ಕಡೆ ಎನ್ನುವ ಸದುದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಇದು ಪ್ರತಿಯೊಬ್ಬರಿಗಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಾಬುಸಿಂಗ ಮಹಾರಾಜರ ದಿವ್ಯ ಸಾನಿಧ್ಯ
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಬಾಬುಸಿಂಗ ಮಹಾರಾಜರು ವಹಿಸಲಿದ್ದಾರೆ. ಪೌರಾಗಡ್, ಅದೃಶ್ಯ ಕಾಡಸಿದ್ದೇಶರ ಸ್ವಾಮಿಗಳು, ಗುರುಮಹಾಂತ ಶಿವಯೋಗಿಗಳು, ಬಸವಲಿಂಗ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಪರ್ವತಲಿಂಗ ಪರಮೇಶ್ವರ ಮಹಾರಾಜರು, ಕಾಸಪ್ಪ ಧರಿಗೊಂಡ ಪೂಜಾರಿ, ಗೋಪಾಲ ಮಹಾರಾಜರು, ಸೋಮಲಿಂಗ ಸ್ವಾಮಿಗಳು, ಯೋಗೇಶ್ವರಿ ಮಾತಾಜಿಯವರು ಸೇರಿದಂತೆ ರಾಜ್ಯದ ಹಲವು ಪೂಜ್ಯರುಗಳು ಆಗಮಿಸಲಿದ್ದಾರೆ ಎಂದರು.
ಈ ವೇಳೆ ಬಂಜಾರ ಸಮಾಜ ಮುಖಂಡರಾದ ಡಿ.ಎಲ್. ಚವ್ಹಾಣ, ಶಂಕರ ಚವ್ಹಾಣ, ಮಹೇಂದ್ರ ನಾಯಕ, ಸುರೇಶ ಬಿಜಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.