ರಾಮನಗರ : ಕಳೆದ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿ ಅಂತ ಸಿ.ಪಿ ಯೋಗೆಶ್ವರ್ ಅವರಿಗೆ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಮನವಿ ಮಾಡ್ತಾ ಇದ್ರು. ಸಿಪಿವೈ ಮನೆಗೆ ಹೋಗಿ ಕೈ ಕಟ್ಕೊಂಡು ಹೇಳ್ತಾ ಇದ್ರು. ಅದೇ ರೀತಿ ಯೋಗೆಶ್ವರ್ ತಮ್ಮ ತಾಕತ್ ತೋರಿಸಿ ಸರ್ಕಾರ ಕೆಡವಿದ್ರು ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿ.ಪಿ ಯೋಗೆಶ್ವರ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿ ಅಂತ ಸವಾಲ್ ಹಾಕಿದ್ದ ಶಾಸಕ ಹೆಚ್.ಸಿ ಬಾಲಕೃಷ್ಣ ಅವರಿಗೆ ಪ್ರತಿ ಸವಾಲೆಸೆದರು.
ಇವಾಗ ಏನು ಸಿ.ಪಿ ಯೋಗೆಶ್ವರ್ ಸರ್ಕಾರವನ್ನ ಕೆಡುವುದಿಲ್ಲ. ಕಾಂಗ್ರೆಸ್ನ ಶಾಸಕರೇ ಸರ್ಕಾರ ಇರೊಲ್ಲ ಅಂತ ಹೇಳ್ತಾ ಇದ್ದಾರೆ. ಸಿ.ಪಿ ಯೋಗೆಶ್ವರ್ ವಿರುದ್ಧ ಮಾತನಾಡುವ ನೈತಿಕತೆ ಬಾಲಕೃಷ್ಣಗೆ ಇಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸ್ತೇವೆ ಎಂದು ಚಾಲೆಂಜ್ ಹಾಕಿದರು.
ನಿಮ್ಮ ತಾಕತ್ ತೋರಿಸಿ ನೋಡೊಣ
ಯೋಗೆಶ್ವರ್ ಒಬ್ಬ ಸಾಮಾನ್ಯ ಕುಟುಂಬದಿಂದ ಬಂದು ಮಂತ್ರಿಯಾಗಿ ಎಲ್ಲಾ ಸ್ಥಾನ ಅಲಂಕರಿಸಿದ್ದಾರೆ. ಘಟನುಘಟಿ ನಾಯಕರ ವಿರುದ್ದ ಗೆದ್ದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ನಿಮ್ಮ ತಾಕತ್ ಏನೆಂದು ತೋರಿಸಿ ನೋಡೊಣ. ನಿಮ್ಮ ಕೈಲಿ ನಾನು ಶಾಸಕನಾಗಿದ್ದ ವೇಳೆ ಮಾಡಿದ್ದ ರಸ್ತೆಗಳ ಗುಂಡಿ ಮುಚ್ಚೋಕೆ ಆಗ್ತಿಲ್ಲ. ಸರ್ಕಾರ ಬಂದು 6 ತಿಂಗಳು ಆಗಿದೆ. ಒಂದೇ ಒಂದು ರೂಪಾಯಿ ಹೊಸದಾಗಿ ಅನುದಾನ ತಂದಿಲ್ಲ. ನಮ್ಮ ಅವಧಿಯ ಕಾಮಗಾರಿಗಳನ್ನು ಇದೀಗ ತಮ್ಮ ಶಿಷ್ಯಂದಿರಿಗೆ ಕೊಡಿಸೋಕೆ ಮುಂದಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.