ಮಂಗಳೂರು : ನಾನು ಮತ್ತು ನನ್ನ ಪತ್ನಿ ಬೆಂಗಳೂರಿಂದ ಬಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ. ಈ ಹಿಂದೆ ಸಂಕಲ್ಪ ಮಾಡಿದಂತೆ ವಿಶೇಷ ಪೂಜೆ ನೆರವೇರಿಸಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಇದೆ. ಬಾಕಿ ವಿಷಯ ಸೀಟು ಮತ್ತೊಂದು ವಿಚಾರ ದಸರಾದ ಮೇಲೆ ಚರ್ಚೆ ನಡೆಯಲಿದೆ ಎಂದರು.
ಈ ಮೊದಲೇ ಪಕ್ಷದ 19 ಶಾಸಕರು ಮತ್ತು 8 ಮಂದಿ ಎಂಎಲ್‌ಸಿಗಳೊಂದಿಗೆ ಎರಡು ಸುತ್ತಿನ ಚರ್ಚೆ ನಡೆಸಲಾಗಿದೆ. ಅದರ ನಂತರವೇ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಚರ್ಚಿಸಿದ್ದಾರೆ. ಜಾತಿ ಆಧಾರದ ಮೇಲೆ ಮತಗಳು ಹೇಗೆ ವಿಭಜನೆ ಆಗುತ್ತೆ ಅನ್ನೋದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 33% ಪರ್ಸೆಂಟ್, ಕಾಂಗ್ರೆಸ್ 40 ರಿಂದ 42 ಮತ್ತು ಜೆಡಿಎಸ್ಗೆ 20ರಿಂದ 22 ಪರ್ಸೆಂಟ್ ಮತಗಳು ಬಂದಿರಬಹುದು ಎಂದು ಹೇಳಿದರು.
28 ಸೀಟು ಗೆಲ್ಲುವ ಉತ್ಸಾಹದಲ್ಲಿದ್ದಾರೆ
ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಜನರು ಯಾವ ರೀತಿ ತೀರ್ಮಾನ ಮಾಡುತ್ತಾರೆ ನೋಡಬೇಕು. ಈ ಹಿಂದೆ ರಾಜ್ಯ ರಾಜಕೀಯದಲ್ಲಿ ಏನೆಲ್ಲ ನಡೆದಿದೆ ಅದರ ಬಗ್ಗೆ ಮಾತನಾಡಿ ಉಪಯೋಗವಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ರಾಜ್ಯದಲ್ಲಿ 28 ಸೀಟು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆದ್ದರಿಂದ ಈಗ ನಾವು ಜೆಡಿಎಸ್ ಮತ್ತು ಬಿಜೆಪಿ ಒಟ್ಟುಗೂಡಿ ಹೋಗಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು
ಈಗ ನನಗೆ 91 ವರ್ಷ ವಯಸ್ಸಾಗಿದೆ
ರಾಷ್ಟ್ರ ರಾಜಕಾರಣದಲ್ಲಿ ಆಗಿರುವ ಹೊಸ ಅಲಯನ್ಸ್(ಮೈತ್ರಿ) ಬಗ್ಗೆ ಚರ್ಚೆ ಮಾಡಲು ಹೋಗಲ್ಲ. NDA ಆಗಲಿ I.N.D.I.A ಆಗಲಿ ಯಾರ ಬಗ್ಗೆನೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಈಗ ನನಗೆ 91 ವರ್ಷ ವಯಸ್ಸಾಗಿದೆ, ಹಾಗಾಗಿ ಅದೆಲ್ಲ ಬೇಡ ಈಗ. ಹಿಂದಿನಿಂದಲೂ ಶಿವಮೊಗ್ಗ ಬಹಳ ಸೆನ್ಸೆಟಿವ್ ಏರಿಯಾ. ಇಂತಹ ವಿಷಯಗಳಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದು ದೇವೇಗೌಡ ಹೇಳಿದರು.