Wednesday, January 22, 2025

ಜೆಡಿಎಸ್ – ಬಿಜೆಪಿ ಮೈತ್ರಿಗೆ ರಾಮನಗರ ಮುಖಂಡರಿಂದ ಸರ್ವ ಸಮ್ಮತಿ

ರಾಮನಗರ: ಬಿಜೆಪಿ ಜತೆ ಜೆಡಿಎಸ್ ಮೈತ್ರಿಯ ಬಗ್ಗೆ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ಪೂರ್ಣ ಸಹಮತ ವ್ಯಕ್ತಪಡಿಸಿದ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಘೋಷಣೆ ಮಾಡಿದರು.

ಬಿಡದಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದಲ್ಲಿ ನಡೆದ ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಹಾಗೂ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿಸ್ತೃತ ಸಮಾಲೋಚನೆ ನಡೆಸಲಾಯಿತು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮಂಜುನಾಥ್ ಅವರುಗಳು ಜಿಲ್ಲೆಯ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರಗಳ ನೂರಾರು ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮಂಡಿಸಿದರಲ್ಲದೆ, ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಾವೆಲ್ಲರೂ ಬದ್ಧ ಎಂದು ಎಂದು ಹೇಳಿದರು.

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಜಿಲ್ಲೆಯ ಮುಖಂಡರ ಜತೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಪಟಾಕಿ ದುರಂತ: ಮೃತ ಪ್ರಭಾಕರನ್​ ತಾಯಿ ಕಣ್ಣೀರು!

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ:

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ.ಮಂಜುನಾಥ್ ಅವರು ಮಾತನಾಡಿ, ನಮ್ಮ ವಿರೋಧಿಗಳೂ ಪಿತೂರಿ ಮಾಡಿದರು. ರಾತ್ರೋರಾತ್ರಿ ಕೂಪನ್ ಗಳನ್ನು ಹಂಚಿ ಮುಗ್ಧ ಮತದಾರರನ್ನು ಯಾಮಾರಿಸಿ ಚುನಾವಣೆ ಗೆದ್ದಿದ್ದಾರೆ. ಈಗ ಮೆರೆಯುತ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ ಎಂದರು.

ಕಾಂಗ್ರೆಸ್ ಮೊದಲಿನಿಂದಲೂ ನಮ್ಮ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕುತ್ತಲೇ ಇದೆ. ಒಂದು ಕಡೆ ಜಾತ್ಯತೀತ ತತ್ವಗಳ ಬಗ್ಗೆ ಮಾತನಾಡುವ ಆ ಪಕ್ಷ, ಇನ್ನೊಂದೆಡೆ ಆ ತತ್ವದ ಪಕ್ಷಗಳನ್ನು ಮೂಲೋತ್ಪಾಟನೆ ಮಾಡುತ್ತಿದೆ ಎಂದ ಅವರು, ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಕಾಂಗ್ರೆಸ್ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದೆ. ಅಲ್ಪಸಂಖ್ಯಾತರಿಗೆ ಜೆಡಿಎಸ್ ಅನ್ಯಾಯ ಮಾಡುತ್ತಿದೆ ಎಂದು ಕೈ ಪಕ್ಷ ಹೊಸ ಸುಳ್ಳು ಹಬ್ಬಿಸುತ್ತಿದೆ. ಹಿಂದೆ ಈ ಸಮುದಾಯ ಕಷ್ಟಕ್ಕೆ ಸಿಲುಕಿದಾಗ ಕುಮಾರಸ್ವಾಮಿ ಒಬ್ಬರೇ ದನಿ ಎತ್ತಿದ್ದು. ಇವತ್ತು ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ನವರಿಗೆ ಎದ್ದು ನಿಂತು ಅವರ ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2018ರಲ್ಲಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಹನ್ನೊಂದನೇ ದಿನಕ್ಕೆ ರಾಮನಗರ ಜಿಲ್ಲೆಗೆ 540 ಕೋಟಿ ರು. ಅನುದಾನ ಕೊಟ್ಟು ಸತ್ತೆಗಾಲ ಯೋಜನೆಗೆ ಚಾಲನೆ ಕೊಟ್ಟರು. ಇವರು ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಆಯಿತು. ಇನ್ನು ಜಿಲ್ಲೆಗೆ ಒಂದು ಬಿಡಿಗಾಸು ಅನುದಾನ ಬಂದಿಲ್ಲ ಎಂದು ಅವರು ಟೀಕಿಸಿದರು.

ಪೊಲೀಸ್ ಠಾಣೆಗಳ ಮೂಲಕ ನಮ್ಮ ಮುಖಂಡರು, ಕಾರ್ಯಕರ್ತರಿಗೆ ಹೆದರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ನೀಚ ಕೆಲಸ ಮಾಡುತ್ತಿದ್ದಾರೆ. ಆಮಿಷ ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ನಾವು ತಕ್ಕ ಉತ್ತರ ಕೊಡಬೇಕಿದೆ. ಸಂಸದರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಲೋಕಲ್ ರಾಜಕೀಯ ಮಾಡಿಕೊಂಡು ಪುಢಾರಿ ಕೆಲಸ ಮಾಡುತ್ತಿದ್ದಾರೆ. ಮೂರು ಸಲ ಗೆದ್ದು ಏನು ಮಾಡಿದಿರಿ. ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಂಜುನಾಥ್ ಹೇಳಿದರು.

ಪೊಲೀಸರನ್ನು ಬಳಕೆ ಮಾಡಿಕೊಂಡು ನಾವು ರಾಜಕೀಯ ಮಾಡಿಲ್ಲ, ಅದನ್ನು ಕುಮಾರಣ್ಣ ಕಲಿಸಲಿಲ್ಲ. ಆದರೆ, ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಮ್ಮ ಮುಖಂಡರು, ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ. ಆಯಾ ಪೊಲೀಸ್ ಠಾಣೆಗಳ ಮುಂದೆ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲೆಯ ಹಿರಿಯ ನಾಯಕರಾದ ಸುಬ್ಬಾ ಶಾಸ್ತ್ರಿ, ಹಾಪ್ ಕಾಮ್ಸ್ ದೇವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು, ಹಿರಿಯ ಮುಖಂಡ ಪ್ರಸನ್ನ ಗೌಡ, ಕಬ್ಬಾಳೆ ಗೌಡ, ಚಿನ್ನಸ್ವಾಮಿ, ನಾಗರಕಲ್ಲು ದೊಡ್ಡಿ ಶಿವಣ್ಣ, ನರಸಿಂಹ ಮೂರ್ತಿ ಮುಂತಾದ ಹಿರಿಯ ಮುಖಂಡರು ಹಾಜರಿದ್ದು ತಮ್ಮ ಅಭಿಪ್ರಾಯ ಮಂಡಿಸಿದರು.

RELATED ARTICLES

Related Articles

TRENDING ARTICLES