ಬೆಂಗಳೂರು : ಡಿಫರೆಂಟ್ ಆಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುವ ಹುಚ್ಚಾಟ ಮೆರೆದಿದ್ದ ಯೂಟ್ಯೂಬರ್ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರೀಲ್ಸ್ ಗೀಳಿಗೆ ಬಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಚೇಷ್ಟೆ ಮೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಂತೆಯೇ ಮೆಟ್ರೋದಲ್ಲಿ ಫಿಟ್ಸ್ ಬಂದಂತೆ ವರ್ತಿಸಿ ಪ್ರಾಂಕ್ ಮಾಡಲು ಹೋದ ಯುವಕನಿಗೆ ಖಾಕಿ ದಂಡಾಸ್ತ್ರ ಪ್ರಯೋಗಿಸಿದೆ.
ವಿಜಯನಗರದಿಂದ ಮೆಜೆಸ್ಟಿಕ್ ಕಡೆಗೆ ಚಲಿಸುತ್ತಿದ್ದ ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್ ಒಬ್ಬ ಪ್ರಾಂಕ್ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದಾನೆ. ಚಲಿಸುತ್ತಿರುವ ಮೆಟ್ರೋದಲ್ಲಿ, ಎಸ್ಕಲೇಟರ್ ಮೇಲೆ ಮೂರ್ಛೆ(ಫಿಟ್ಸ್) ಬಂದಂತೆ ವರ್ತಿಸಿದ್ದಾನೆ. ಈ ವೀಡಿಯೋ ಹುಚ್ಚಾಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
14 ಜುಲೈ 2023 ರಂದು ಪ್ರಾಂಕ್ ಪ್ರಜ್ಜು ಎಂಬ ಯುವಕ ಇನ್ಸ್ಟಾಗ್ರಾಂ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ್ದನು. ಪ್ರಾಂಕ್ ಮಾಡಿದ ಯುವಕನ ವಿಳಾಸವನ್ನು ಪತ್ತೆ ಹಚ್ಚಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್, ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಂಕ್ ಆತನ ಮೇಲೆ ದೂರು ದಾಖಲಿಸಿ 500 ರೂ. ದಂಡ ವಿಧಿಸಿದೆ.
ಪತ್ತೆ ಕಾರ್ಯ ಹೇಗಿತ್ತು..!
- ಪ್ರಾಂಕ್ ಪ್ರಜ್ಜು ಇನ್ಸ್ಟಾ ರೀಲ್ಸ್ಗಳ ಪರಿಶೀಲನೆ
- ಬೈಕ್ ಮೇಲೆ ಕೆಲ ರೀಲ್ಸ್ಗಳನ್ನು ಮಾಡಿದ್ದು ಗೊತ್ತಾಗಿದೆ
- KA 02, JZ 8337 ನೊಂದಣಿಯ ಬೈಕ್ ಮೇಲೆ ರೀಲ್ಸ್ ಮಾಡಿದ್ದ ಯುವಕ
- ಬೈಕ್ ಮಾಲೀಕರ ವಿಳಾಸ ಪತ್ತೆ ಹಚ್ಚಿದಾಗ, ಬೈಕ್ ಮಾಲೀಕ ಲಿಖಿತ್ ಕುಮಾರ್ ಪ್ರಜ್ಜುಗೆ ಒಂದುವರೆ ವರ್ಷದ ಹಿಂದೆ ಬೈಕ್ ಮಾರಾಟ ಮಾಡಿರೋದು ಪತ್ತೆ
- ಲಿಖಿತ್ ಕುಮಾರ್ ನಿಂದ ಪ್ರಜ್ಜು ಮೊಬೈಲ್ ನಂಬರ್ ಪಡೆದಾಗ ಆತನ ವಿಳಾಸ ಪತ್ತೆ
- ಪ್ರಾಂಕ್ ಪ್ರಜ್ಜು, ಮೂಡಲಪಾಳ್ಯದ ಪ್ರಿಯದರ್ಶಿನಿ ಲೇಔಟ್ ನಿವಾಸಿ, ಬಿಕಾಂ ಪದವಿಧರ ನಾಗಿರುವ ಪ್ರಜ್ಜು
- ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ NCR ದಾಖಲು
- ಪ್ರಾಂಕ್ ರೀಲ್ಸ್ಗಳನ್ನ ರೆಕಾರ್ಡ್ ಮಾಡಿದ ರಾಜು, ಶಿವು ಮೇಲೂ ಕ್ರಮಕ್ಕೆ ನಿರ್ಧಾರ