ಬೆಂಗಳೂರು: ನಗರಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿಸಿ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಪತ್ರ ಚಳುವಳಿಯನ್ನು ಆರಂಭಿಸಿದೆ.
ವಸಂತ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಪತ್ರ ಚಳುವಳಿಗೆ ಚಾಲನೆ ನೀಡಿತು. ಮೇಕೆದಾಟು ಅಣೆಕಟ್ಟು ನಿರ್ಮಿಸಬೇಕು ಹಾಗೂ ಬೆಂಗಳೂರು ಜಲಮೂಲಗಳ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ನಿವಾಸಿಗಳ ಕೈಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪತ್ರಗಳನ್ನು ಬರೆಸುವ ಮೂಲಕ ಒತ್ತಡ ಹೇರಲಿದೆ. ವಸಂತನಗರದ ನಾಗರಿಕರು ಅಂಗಡಿ ಮಾಲೀಕರುಗಳು ಅತ್ಯಂತ ಉತ್ಸುಕತೆಯಿಂದ ಪತ್ರ ಚಳುವಳಿಗೆ ಸಹಿ ಹಾಕುವ ಮೂಲಕ ಸಂಪೂರ್ಣ ಸಹಕಾರವನ್ನು ತೋರಿಸಿದರು.
ಪಕ್ಷದ ಮುಖಂಡರು ಖುದ್ದಾಗಿ ಕಾರ್ಮಿಕರು, ಆಟೋ ಚಾಲಕರು, ಕಚೇರಿ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಸೇರಿದಂತೆ ಬೆಂಗಳೂರಿನ ಎಲ್ಲ ವರ್ಗದ ಜನರನ್ನು ಭೇಟಿಯಾಗಿ ಪತ್ರವನ್ನು ಬರೆಸುತ್ತಿದ್ದಾರೆ.
ಪತ್ರ ಚಳುವಳಿ ಹಾಗೂ ಜಾಗೃತಿ ಕಾರ್ಯದಲ್ಲಿ ನಗರದಾದ್ಯಂತ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಬೆಂಗಳೂರು ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್ ಮೃತ್ಯುಂಜಯ , ವಿಶ್ವನಾಥ್, ಶಶಿಧರ್ ಆರಾಧ್ಯ, ಬಸವರಾಜ್ ಜಮ್ ಶೆಟ್ಟಿ, ಅನಿಲ್ ನಾಚಪ್ಪ ,ಜಗದೀಶ್ ಬಾಬು , ಮರಿಯಾ, ಉಸ್ಮಾನ್, ಡಾ. ಕೇಶವ್ ಕುಮಾರ್ ಚಂದನ್ ಶೆಟ್ಟಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿದ್ದರು.