ಬೆಂಗಳೂರು: ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದವರಿಗೆ ಭಾರಿ ನಿರಾಸೆಯಾಗಿದ್ದು ಅನುಕಂಪ ಅಧಾರದಡಿ ಕೋರಲಾಗುವ ಉದ್ಯೋಗಕ್ಕೆ ವಿವಾಹಿತ ಪುತ್ರಿಯೂ ಅರ್ಹಳು ಎಂಬ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಈ ಕುರಿತಂತೆ ಆದೇಶಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಎಲ್‌ಐಸಿ ಉದ್ಯೋಗಿಯಾಗಿದ್ದ ತಂದೆಯ ನಿಧನದ ನಂತರ ಅರ್ಜಿದಾರರು ಉದ್ಯೋಗ ಕೋರಿದ್ದಾರೆ. ಆದರೆ, ತಂದೆಯ ನಿಧನಕ್ಕೆ ಹಲವು ವರ್ಷಗಳ ಮುನ್ನವೇ ಅರ್ಜಿದಾರ ಮಹಿಳೆ ಮದುವೆಯಾಗಿ ಪತಿಯ ಜತೆ ನೆಲೆಸಿದ್ದಾರೆ. ಹಾಗಾಗಿ ಹಕ್ಕು ಮಂಡಿಸಲಾಗದು ಎಂದು ಹೇಳಿದೆ.
ಇದನ್ನು ಓದಿ: ಇಂದಿನಿಂದ ಭರತ ಖಂಡದಲ್ಲಿ ‘ವಿಶ್ವ’ ಕಪ್ ಕ್ರಿಕೆಟ್ ಸಂಭ್ರಮ!
ಒಂದು ವೇಳೆ ಮೃತರ ಕುಟುಂಬ ಅರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದು. ಆದರೆ, ಈ ಪ್ರಕರಣದಲ್ಲಿ ಎಲ್‌ಐಸಿ ಮೃತರ ಕುಟುಂಬಕ್ಕೆ 1.58 ಕೋಟಿ ಪರಿಹಾರವನ್ನು ಪಾವತಿಸಿದೆ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.