ಮಧ್ಯಪ್ರದೇಶ : ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಒಂದೇ ಕುಟುಂಬವಲ್ಲ, ಒಂದೇ ಕುಟುಂಬದಿಂದ ದೇಶದ ಅಭಿವೃದ್ಧಿಯೂ ಆಗಿಲ್ಲ. ಸ್ವಾತಂತ್ರ್ಯಾನಂತರ ದೇಶದಲ್ಲಿ ದಶಕಗಳ ಕಾಲ ಅಧಿಕಾರದಲ್ಲಿದ್ದ ಪಕ್ಷ ಒಂದೇ ಕುಟುಂಬದವರ ಪಾದಪೂಜೆ ಮಾಡಿದ್ದು ಒಂದೇ ಒಂದು ಕೆಲಸ ಎಂದು ಪ್ರತಿಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ಮಾತನಾಡಿದ ಅವರು, ಇಂದು ನಾನು ಹಳೆಯ ವಿಷವನ್ನು ನನ್ನ ಯುವ ಸ್ನೇಹಿತರಿಗೆ ನೆನಪಿಸಲು ಬಯಸುತ್ತೇನೆ. 2014ಕ್ಕೂ ಮುನ್ನ ಕಾಂಗ್ರೆಸ್ ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಹಗರಣಗಳು ನಿತ್ಯವೂ ಸುದ್ದಿಯಾಗುತ್ತಿದ್ದವು. ಬಡವರಿಗಾಗಿ ಖರ್ಚು ಮಾಡಬೇಕಾಗಿದ್ದ ಹಣ ಕಾಂಗ್ರೆಸ್ ನಾಯಕರ ಖಜಾನೆ ಸೇರುತ್ತಿತ್ತು ಎಂದು ಕುಟುಕಿದರು.
2014ರ ನಂತರ ನೀವು ನಮಗೆ ಸೇವೆ ಮಾಡಲು ಅವಕಾಶ ನೀಡಿದಾಗ ನಾವು ಕಾಂಗ್ರೆಸ್ ಸರ್ಕಾರದ ಭ್ರಷ್ಟ ವ್ಯವಸ್ಥೆಗಳನ್ನು ಬದಲಾಯಿಸುವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ತಂತ್ರಜ್ಞಾನವನ್ನು ಬಳಸಿಕೊಂಡು, ನಾವು ಸರ್ಕಾರದ ದಾಖಲೆಗಳಿಂದ ಸುಮಾರು 11 ಕೋಟಿ ನಕಲಿ ಹೆಸರುಗಳನ್ನು ತೆಗೆದುಹಾಕಿದ್ದೇವೆ. ಈ ಹೆಸರುಗಳು ಎಂದಿಗೂ ಹುಟ್ಟಿಲ್ಲ. ಆದರೆ ಸರ್ಕಾರಿ ಕಚೇರಿಗಳಿಂದ ಖಜಾನೆಯನ್ನು ಲೂಟಿ ಮಾಡುವ ಮಾರ್ಗವಾಗಿದೆ ಎಂದು ಕಿಡಿಕಾರಿದರು.
2.5 ಲಕ್ಷ ಕೋಟಿ ಉಳಿಸಿದ್ದೇವೆ
ಧನ್, ಆಧಾರ್ ಮತ್ತು ಮೊಬೈಲ್ ಎಂಬ ತ್ರಿಮೂರ್ತಿಗಳನ್ನು ಹುಟ್ಟು ಹಾಕಿದ್ದೇವೆ. ಕಾಂಗ್ರೆಸ್ ಪಕ್ಷದ ಭ್ರಷ್ಟ ವ್ಯವಸ್ಥೆಯನ್ನು ನಾಶ ಮಾಡಿದ್ದೇವೆ. ಇಂದು, ಈ ತ್ರಿಕೋನ ಶಕ್ತಿಯಿಂದಾಗಿ, ನಿಮ್ಮ ಮೋದಿ ಅವರು 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಉಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಚಾಟಿ ಬೀಸಿದರು.