ಮಂಡ್ಯ : ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದೆ. ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ 29ನೇ ದಿನಕ್ಕೆ ಕಾಲಿಟ್ಟಿದ್ದು ‘ಚಡ್ಡಿ, ಎಣ್ಣೆ ಬಾಟೆಲ್’ ಹಿಡಿದು ವಿನೂತನವಾಗಿ ಪ್ರತಿಭಟನೆ ಮಾಡಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರದ ಮಂತ್ರಿಗಳಿಗೆ ಚಡ್ಡಿಯ ಚಿಂತೆಯಾಗಿದೆ. ರಾಜ್ಯದ ರೈತರಿಗೆ ನೀರಿನ ಚಿಂತೆಯಾಗಿದೆ. ಹಳ್ಳಿ ಹಳ್ಳಿಗಳಿಗೆ ಬಾರು-ಬೀರು ಬೇಡ. ನೀರಾವರಿ ಯೋಜನೆಗಳನ್ನ ನೀಡಿ ಎಂದು ಘೋಷಣೆ ಕೂಗಿದ್ದಾರೆ.
ರಾಜ್ಯದ ಸಂಸದರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೈಯಲ್ಲಿ ಚಡ್ಡಿಗಳು, ಖಾಲಿ ಎಣ್ಣೆ ಬಾಟೆಲ್ಗಳನ್ನು ಹಿಡಿದು ‘ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಉಳಿಯಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಪರ ಸಂಘಟನೆ ಬೆಂಬಲ
ರೈತ ಹಿತರಕ್ಷಣಾ ಸಮಿತಿಗೆ ಕನ್ನಡಪರ ಸಂಘಟನೆ ಹಾಗೂ ಮಾಜಿ ಶಾಸಕ ಡಾ.ಕೆ. ಅನ್ನದಾನಿ ಬೆಂಬಲ ಸೂಚಿಸಿದ್ದಾರೆ. ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರೋದಕ್ಕೆ ಕಿಡಿಕಾರಿದ ಅನ್ನದಾನಿ ಅವರು, ತಕ್ಷಣವೇ ತಮಿಳುನಾಡಿಗೆ ನೀರು ಬಿಡೋದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.