ಶಿವಮೊಗ್ಗ : ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸರು ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಕಿಟಕಿ ಗಾಜು, ಮನೆಗಳಿಗೆ, ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಕ್ಕೆ ಮಹಿಳೆಯರು ಕಿಡಿಕಾರಿದ್ದಾರೆ. ಒಬ್ಬೊಬ್ಬರೆ ಮಹಿಳೆಯರು ಮನೆಯಲ್ಲಿರುವಾಗ ಬಂದು ದಾಳಿ ಮಾಡಿದ್ದಾರೆ. ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವೆ. ನಮ್ಮ ಮನೆ ಮೇಲೆ 15ಕ್ಕೂ ಹೆಚ್ಚು ಜನರು ಬಂದು ಕಲ್ಲು ತೂರಿದ್ದಾರೆ ಎಂದು ಹೇಳಿದ್ದಾರೆ.
ಮಚ್ಚು, ಲಾಂಗು, ಕಲ್ಲಿನಿಂದ ದಾಳಿ ಮಾಡಿದ್ದಾರೆ. ಇಲ್ಲಿ ಜೀವನ ಸಾಗಿಸುವುದೇ ದುಸ್ತರವಾಗಿದೆ. ನಾವು ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಪೊಲೀಸರು ನಮಗೆ ಸೂಕ್ತ ರಕ್ಷಣೆ ನೀಡಬೇಕು. ಒಂಟಿ ಮಹಿಳೆಯರು, ಮಕ್ಕಳು ಮನೆಯಲ್ಲಿ ಇರ್ತಾರೆ. ಯಾರು ನಮ್ಮ ನೋವು ಕೇಳೋಕೆ ಬಂದಿಲ್ಲ ಎಂದು ಮಹಿಳೆಯರು ನಿನ್ನೆ ನಡೆದ ಗಲಭೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನ, ಸೆಕ್ಷನ್ 144 ಜಾರಿ
ಕಲ್ಲು ತೂರಾಟ ಹಿನ್ನೆಲೆಯಲ್ಲಿ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳಕ್ಕೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಭೇಟಿ ನೀಡಿ ಗುಂಪನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಶಿವಮೊಗ್ಗದ ಶಾಂತಿನಗರದ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೆ ಆದೇಶಿಸಿದ್ದಾರೆ.