Wednesday, January 22, 2025

ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್:ಸಿಎಂ

ಬೆಂಗಳೂರು : ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೆಚ್.ಬಿ.ಆರ್ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ವೈವಿಧ್ಯತೆಯನ್ನು ಮತ್ತು ಏಕತೆಯನ್ನು ಇತರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಭಿನ್ನ ಸಂಸ್ಕೃತಿಗಳ ನಡುವೆ ಸಮನ್ವಯ, ಸೌಹಾರ್ದ ಇಲ್ಲದೇ ಹೋದರೆ ಆ ದೇಶದಲ್ಲಿ, ಆ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ನೆಮ್ಮದಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಮೊಯ್ದೀನ್ ಅವರು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಬಿತ್ತುವವರು ಈ ದೇಶದ ಅವನತಿಗೆ ಕಾರಣ ಆಗುತ್ತಾರೆ. ನಮ್ಮ ಸಂವಿಧಾನ ಜಾತ್ಯತೀತತೆಯನ್ನು , ಸೌಹಾರ್ದತೆಯನ್ನು ಎತ್ತಿ ಹಿಡಿದಿದೆ. ಭಾರತದಲ್ಲಿ ಜಾತ್ಯತೀತ ಮೌಲ್ಯವನ್ನು ಮತ್ತು ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎಂದು ವಿವರಿಸಿದರು.

ಜಾತ್ಯತೀತ ಜನತಾದಳದ ಸಂಸ್ಥಾಪಕ ಸದಸ್ಯ ನಾನು. ಬದುಕಿರುವವರೆಗೂ ಬಿಜೆಪಿ ಜತೆ ಸೇರುವುದಿಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಇದೇ ದೇವೇಗೌಡರು ಬಿಜೆಪಿ ಜತೆ ಕೈಜೋಡಿಸುತ್ತಿದ್ದಾರೆ. ಎಲ್ಲಿ ಹೋಯಿತು ಜಾತ್ಯತೀತ ಮೌಲ್ಯ ಎಂದು ಪ್ರಶ್ನಿಸಿದರು.

ನಾನು ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಸೇರಿ ಫಾರೂಕ್ ಗೆ ಜೆಡಿಎಸ್ ಗೆ ಹೋಗಬೇಡ, ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಹೋಗು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಈಗ ಏನಾಗಿದೆ ನೋಡಿ ಎಂದು ವಿವರಿಸಿದರು.

ಕಾನೂನು ಕೈಗೆತ್ತಿಕೊಂಡರೆ ಕ್ರಮ :

ನಮ್ಮ ಆಡಳಿತದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ. ಎಲ್ಲಾ ಜಾತಿ, ಧರ್ಮದವರಿಗೂ ಅವರ ಸಂವಿಧಾನಬದ್ದ ಹಕ್ಕುಗಳನ್ನು ಆಚರಿಸಲು ಅವಕಾಶವಿದೆ. ಇದಕ್ಕೆ ಯಾರೇ ತೊಂದರೆ ಕೊಟ್ಟರು ಕ್ರಮ ಖಚಿತ ಎಂದು ಎಚ್ಚರಿಸಿದರು.

ಈ ವೇಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಬ್ಯಾರೀಸ್ ಸೌಹಾರ್ದ ಭವನ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಮಹಮದ್ ಬ್ಯಾರಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES