ಬೆಂಗಳೂರು : ರಾಜ್ಯ ಸರ್ಕಾರ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯವನ್ನು ಮಾಡಿದರು.
ವಿಧಾನಸಭೆ ವಿಶೇಷ ಅಧಿವೇಶನ ಕರೆದು, ಸಂಕಷ್ಟ ಸೂತ್ರ ಜಾರಿಯಾಗುವ ತನಕ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರನ್ನು ಮು.ಚಂದ್ರು ಹಾಗೂ ಕುರುಬೂರು ಶಾಂತಕುಮಾರ್ ಜಂಟಿಯಾಗಿ ಒತ್ತಾಯಿಸಿದರು.
ಇದನ್ನೂ ಓದಿ : ತಜ್ಞರ ತಂಡದ ಜತೆ ಚರ್ಚೆ ಬಳಿಕ ತೀರ್ಮಾನ: ಹೋರಾಟಗಾರರಿಗೆ ಸಿಎಂ ಅಭಯ
ಕಾವೇರಿ ವ್ಯಾಪ್ತಿಗೆ ಸೇರಿದ 4 ರಾಜ್ಯಗಳ ಪರಿಣಿತರು, ನೀರಾವರಿ ತಜ್ಞರು, ರೈತ ಪ್ರತಿನಿಧಿಗಳು, ಹವಮಾನ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳಿರುವ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಕುಡಿಯುವ ನೀರಿಗಾಗಿ ಹೆಚ್ಚು ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಯೋಜನೆ ನಿರ್ಮಾಣ ಕಾರ್ಯ ಆರಂಭಿಸಬೇಕು, ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.
ಇದೇ ವೇಳೆ ಕರ್ನಾಟಕ ನೆಲ, ಜಲ, ಭಾಷೆ ಹಾಗೂ ರೈತರಿಗಾಗಿ ಹೋರಾಟ ಮಾಡಿದ ಸಂಘಟನೆಗಳ ಮುಖಂಡರುಗಳ, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮುಖಂಡರ ಮೇಲಿರುವ ಹೋರಾಟದ ಮೊಕ್ಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮೊನ್ನೆ ಸೆ.26ರಂದು ನಾವು ನಡೆಸಿದ ಬೆಂಗಳೂರು ಬಂದ್ ಸಂದರ್ಭ ಕರೆ ಮಾಡಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆಗೆ ಆಹ್ವಾನಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ ಅವರು 3 ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪೂರ್ವ ಯೋಜನೆಯನ್ನು ಕೈಬಿಡಲಾಯ್ತು ಎಂದು ಮು.ಚಂದ್ರು ವಿವರಿಸಿದರು.
ಇದೇ ವೇಳೆ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲಾ ಸ್ವಾಮಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.