Sunday, December 22, 2024

ಕಾವೇರಿ ಸಮಸ್ಯೆ ಪರಿಹಾರಕ್ಕೆ ತಮಿಳುನಾಡು ಸರ್ಕಾರದ ಮನವೊಲಿಸಲಿ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ಹಿತ ಬಲಿಕೊಡುತ್ತಿದ್ದು, ಕಾವೇರಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ತಮಿಳುನಾಡಿನ ಸರ್ಕಾರದ ಮನವೊಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, ಬೆಂಗಳೂರು ಬಂದ್ ಹಾಗೂ ಕಾವೆರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಯಶಸ್ವಿಯಾಗಿದೆ. ಜನರ ಆಕ್ರೋಶ ಕಟ್ಟೆ ಒಡೆದಿದೆ. ಇಷ್ಟೆಲ್ಲ ಆದರೂ ಸರ್ಕಾರ ಎಚ್ಚೆತ್ತುಕೊಂಡತೆ ಕಾಣಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. ನಾವು ಸರ್ಕಾರದಲ್ಲಿ ಇದ್ದಾಗ ಪ್ರತಿಭಟನೆ ಹತ್ತಿಕ್ಜುವ ಕೆಲಸ ಮಾಡಿರಲಿಲ್ಲ. ಮುಖ್ಯಮಂತ್ರಿಗಳು ಪ್ರತಿಭಟನೆ ಹತ್ತಿಕ್ಕುವುದಿಲ್ಲ ಅಂತ ಹೇಳಿದರು. ಆದರೆ,ವಎಲ್ಲ ಕಡೆ ಪ್ರತಿಭಟನಾಕಾರರನ್ನು ಬೆಳಿಗ್ಗೆಯಿಂದಲೇ ಬಂಧಿಸುವ ಕೆಲಸ ಮಾಡಿದ್ದಾರೆ. ಇದರ ನಡುವೆ ಹೋರಾಟಗಾರರೂ ಯಶಸ್ವಿಯಾಗಿ ಬಂದ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ ಒಗ್ಗಟ್ಟಿನ ಅಗತ್ಯ ಇತ್ತು. ಜನ ಮತ್ತು ಸಂಘಟನೆಗಳು ಒಗ್ಗಟ್ಟಿನಿಂದ ಬಂದ್ ಯಶಸ್ವಿ ಮಾಡಿವೆ ಎಂದು ಹೇಳಿದರು.

ಕೊವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನವರು ರಾಜಕಾರಣಕ್ಕಾಗಿ ಮೆಕೆದಾಟು ಪಾದಯಾತ್ರೆ ಮಾಡಿದ್ದರು, ಆಗ ನಾವು ನಿಮಗೆ ಸಮಾವೇಶ ಮಾಡಲು ಅವಕಾಶ ಕೊಟ್ಟಿದ್ದೇವು. ಈಗ ಹೊರಾಟಗಾರರು ಫ್ರೀಡಂ ಪಾರ್ಕ್ ವರೆಗೂ ಜಾಥಾ ನಡೆಸಲು ಬಿಡುತ್ತಿಲ್ಲ. ಅವರೇನು ನಿಮ್ಮ ಅಧಿಕಾರ, ನಿಮ್ಮಿಂದ ಸಹಾಯ ಕೇಳುತ್ತಿಲ್ಲ. ನಿಮ್ಮ ಸರ್ಕಾರ ಕಾವೇರಿ ಕಾಪಾಡಲು ವಿಫಲವಾಗಿದೆ‌ ಅಂತ ಗಮನ ಸೆಳೆಯಲು ಪ್ರತಿಭಟನೆ ನಡೆಸಲು ಅವಕಾಶ ಕೊಡುತ್ತಿಲ್ಲ. ಸರ್ಕಾರ ಪೊಲೀಸರ ಮೂಲಕ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರೈತರು ರಾಜಕಾರಣ ಮಾಡುತ್ತಾರಾ ? :
ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘದವರು ಕನ್ನಡ ಸಂಘದವರು ರಾಜಕಾರಣ ಮಾಡುತ್ತಾರಾ? ನಿಮ್ಮ ಒಕ್ಕೂಟದ ಸ್ನೇಹಿತರ ಹಿತ ಕಾಯುವುದನ್ನು ಬಿಟ್ಟು ರಾಜ್ಯದ ಹಿತ ಕಾಯಿರಿ.

ಇವರು ತಮಿಳುನಾಡಿಗೆ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ತಿಕೆ ಕೇಳಿದರೆ ಅದನ್ನು ಹೇಗೆ ಮಾಡಲು ಸಾಧ್ಯವಿದೆ‌. ತಮಿಳುನಾಡು ಇಂಡಿಯಾದಲ್ಲಿದೆ‌. ಕಾಂಗ್ರೆಸ್ ಮಿತ್ರ ಪಕ್ಷವಾಗಿದೆ. ಸೋನಿಯಾಗಾಂಧಿ ಖರ್ಗೆ ಅವರನ್ನು ಕರೆಯಿಸಿ ಮಾತನಾಡಿಸಲಿ. ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಮಾತುಕತೆಗೆ ಒಪ್ಪಿಸಲಿ ಎಂದು ಹೇಳಿದರು.

ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಮಾಜಿ ಪ್ರಧಾನಿ ದೇವೆಗೌಡರು ಹೇಳಿದ್ದಾರೆಂದು ಕೇಳಿದ ಪ್ರಶ್ನೆಗೆ ಅವರು, ನೇರವಾಗಿ ಮಧ್ಯ ಪ್ರವೇಶ ಮಾಡಿ ಅಂತ ಹೇಳಲಿ, ಕಾವೇರಿ ಟ್ರಿಬ್ಯುನಲ್ ಆದೇಶ ಆದ ಮೇಲೆ ಸುಪ್ರೀಂ ಆದೇಶ ಆದಹಾಗೆ ಸುಪ್ರೀಂ ನಲ್ಲಿ ವಿಚಾರಣೆ ಹಂತದಲ್ಲಿದ್ದಾಗ ಹಿಂದಿನ ಪ್ರಧಾನಿಗಳು ಮಧ್ಯಪ್ರವೇಶ ಮಾಡಿದ್ದರು ಎಂದರು.

ಡಿಸಿಎಂ ಹೇಳಿಕೆಯ ಔಚಿತ್ಯವೇನು? :
ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಸಿಡಬ್ಲುಆರ್ಸಿಯಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೆಆರ್ ಎಸ್ ಗೆ 10 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದೆ ಎಂದು ಹೇಳುವ ಉದ್ದೇಶವೇನಿತ್ತು. ಇವರ ಹೇಳಿಕೆಯಿಂದ ಸಿಡಬ್ಲುಆರ್ ಸಿ ಮೇಲೆ ಪರಿಣಾಮ ಬೀರುವುದಿಲ್ಲವೇ, ಇವರ ಈ ರೀತಿಯ ಹೇಳಿಕೆಯಿಂದಲೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.

ಸಿಡಬ್ಲುಆರ್ ಸಿ ಮತ್ತೆ ಪ್ರತಿದಿನ 3000 ಕ್ಯೂಸೆಕ್ಸ್ ನೀರ ಬಿಡುವಂತೆ ಹೇಳಿದ್ದು, ಅವರದು ಏನೇ ಆದೇಶ ಬಂದರೂ ಕೂಡ ರಾಜ್ಯ ಸರ್ಕಾರ ಅದನ್ನು ಒಪ್ಪಬಾರದು. ತಕ್ಷಣ ಸುಪ್ರೀಂ ಕೋರ್ಟ್ ಗೆ ಐಎ ಹಾಕಬೇಕು. .
ಸಿಡಬ್ಲುಎಂಎ ಸಿಡಬ್ಕುಆರ್‌ಸಿ ಆದೇಶ ವೈಜ್ಞಾನಿಕವಾಗಿಲ್ಲ. ಅವರು ವಸ್ತುಸ್ಥಿತಿ ಅರಿತು ಆದೇಶ ಮಾಡಬೇಕು. ಅದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ನಾಯಕತ್ವ ಸರಿಯಾದ ಲೀಡ್ ತೆಗೆದುಕೊಳ್ಳಬೇಕು. ಇವರು ಹಗುರವಾಗಿ ತೆಗೆದುಕೊಂಡಿರುವದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ನಾವೇ ಐಎ ಹಾಕಿದರೆ ನಮ್ಮ ಪರಿಸ್ಥಿತಿ, ಅವರ ಪರಿಸ್ಥಿತಿ ಏನಿದೆ ಅಂತ ಹೇಳಲು ಹೆಚ್ಚು ಅವಕಾಶ ಇರುತ್ತದೆ ಎಂದರು.

ಬೀದಿಗಿಳಿದು ಹೋರಾಟ :

ರಾಜ್ಯ ಸರ್ಕಾರದ ಗಮನ ಸೆಳೆಯಲು ಬಿಜೆಪಿ ಸೇರಿದಂತೆ ರೈತರು ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ ಆಚರಣೆ ಮಾಡಿದ್ದೇವೆ. ಆದರೆ, ಈ ಸರ್ಕಾರ ಕೇಳುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶ ಸುಪ್ರೀಂ ಕೋರ್ಟ್ ಗೆ ತಲುಪಿಸಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.

ಸರ್ಕಾರ ಕಡಿಮೆ ನೀರು ಹರಿಸುವಂತೆ ಮಾಡಿಸಿದ್ದೇವೆ ಎನ್ನಲು‌ ಇದೇನು ಬಟ್ಟೆ ವ್ಯಾಪಾರವೇ ಇದು ಕಾವೇರಿ ನೀರಿನ ಸಮಸ್ಯೆ ಇದು ಗಂಭೀರವಾದ ವಿಚಾರ ಎಂದರು. ಇನ್ನು ರಾಜ್ಯದ ಪರ ವಾದ ಮಾಡುತ್ತಿರುವ ವಕೀಲರನ್ನು ಬದಲಾಯಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಕೀಲರ ತಂಡ ಬದಲಾವಣೆ ಮಾಡುವ ವಿಚಾರ ಸರ್ಕಾರಕ್ಕೆ ಬಿಟ್ಟದ್ದು, ಅವರ ನಡುವೆ ಏನು ಮಾತುಕತೆಯಾಗಿದೆಯೋ ಗೊತ್ತಿಲ್ಲ ಎಂದರು.

RELATED ARTICLES

Related Articles

TRENDING ARTICLES