ಉತ್ತರ ಕನ್ನಡ : ಕೊರೋನಾ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಇತ್ತೀಚಿಗೆ ಕಾಣಿಸುತ್ತಿವೆ. ಅದರಲ್ಲಿ ಇಲಿ ಜ್ವರ ಕೂಡ ಒಂದು. ಇಲಿ ತಾನೆ ಎಂದು ನಿರ್ಲಕ್ಷ ಮಾಡುವ ಹಾಗಿಲ್ಲ. ಏಕೆಂದರೆ ವೈದ್ಯರ ಪ್ರಕಾರ ಇದು ತುಂಬಾ ಡೇಂಜರ್. ಈ ಇಲಿ ಜ್ವರ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇಲಿ ಜ್ವರ ಸಾಮಾನ್ಯವಾದ ಜ್ವರವಲ್ಲ. ಇಲಿ ಜ್ವರ ಸಾಕಷ್ಟು ಅಪಯಾಕಾರಿಯಾದ ಕಾಯಿಲೆ ಎಂದೇ ಹೇಳಲಾಗುತ್ತದೆ. ಇದೊಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿ ಕಚ್ಚಿ ಮಾತ್ರ ನಿಮಗೆ ಜ್ವರ ಬರಬೇಕು ಎಂದೇನಿಲ್ಲ. ಅದರ ಎಂಜಲು, ಅದರ ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು.
ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಿ ಜ್ವರದ 35ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.. ಆರೋಗ್ಯ ಇಲಾಖೆ ಇಲಿ ಜ್ವರ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ, ಸಿದ್ದಾಪುರ, ಕಾರವಾರ, ಶಿರಸಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಇಲಿ ಜ್ವರದ ಲಕ್ಷಣಗಳಾವುವು ಎಂಬುದನ್ನು ನೋಡುವುದಾದರೆ..,
ಇಲಿ ಜ್ವರದ ಲಕ್ಷಣಗಳು
- ವಿಪರೀತ ಜ್ವರ
- ತಲೆನೋವು
- ಚಳಿ
- ಸ್ನಾಯು ನೋವು
- ವಾಂತಿ
- ಕಾಮಾಲೆ
- ಹೊಟ್ಟೆ ನೋವು
- ಅತಿಸಾರ
- ಅಲರ್ಜಿ
ಈ ರೋಗ ಲಕ್ಷಣಗಳು ಕಾಣಿಸಿಕೊಂಡ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.
ಈ ಸುದ್ದಿ ಓದಿದ್ದೀರಾ? : ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ಕಾಳಜಿ
ಜ್ವರ ಬಂದು ಗುಣಮುಖರಾಗಿ ಮತ್ತೆ ಕಾಯಿಲೆ ಬಂದರೆ ಅತ್ಯಂತ್ಯ ಅಪಾಯಕಾರಿಯೆಂದು ಹೇಳಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮೂತ್ರಪಿಂಡದ ಹಾನಿ, ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಯ ಉರಿಯೂತ, ಯಕೃತ್ತಿನ ವೈಫಲ್ಯ, ಉಸಿರಾಟದ ತೊಂದರೆ ಮತ್ತು ಸಾವಿಗೆ ಕಾರಣವಾಗಬಹುದು.
ಒಟ್ಟಾರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬಂದಿರುವ ರೋಗಿಗಳಿಗೆ ಚಿಕಿತ್ಸೆ ಕೊಡುವ ಕಾರ್ಯಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಎಲ್ಲೆಲ್ಲಿ ಇಲಿ ಜ್ವರ ಕಂಡು ಬಂದಿದೆಯೋ ಆ ಪ್ರದೇಶದಲ್ಲಿ ರೋಗ ಹರಡದಂತೆ ಮುಂಜಾಗ್ರತೆವಹಿಸುವ ಕಾರ್ಯ ನಡೆಯುತ್ತಿದೆ. ಇಲಿ ಜ್ವರ ಹರಡದಂತೆ ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳುವ ಮೂಲಕ ಎಚ್ಚರ ವಹಿಸುವ ಅಗತ್ಯವಿದೆ.