ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಮಾಡಲು ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರನ್ನು ಬಲಿ ಕೊಡ್ತಾ ಇದೆ. ಜನರ ಬಗ್ಗೆ ಇವರಿಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಕಿಡಿಕಾರಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗಮನ ಐದು ಗ್ಯಾರಂಟಿ, ಲೋಕಸಭಾ ಚುನಾವಣೆ ಅಷ್ಟೇ. ಕಾವೇರಿ ವಿಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಗಮನ ಇಲ್ಲ. ಗಮನ ಇದ್ದಿದ್ರೆ ಪ್ರಾಧಿಕಾರದ ಮುಂದೆ ಸರಿಯಾಗಿ ವಸ್ತುಸ್ಥಿತಿ ಹೇಳ್ತಾ ಇದ್ರು ಎಂದು ಕುಟುಕಿದರು.
ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ ಹಾಗೆ ಮಾಡಿದ್ದಾರೆ. ಎಲ್ಲರೂ ವಿರೋಧ ಮಾಡಿದ ಬಳಿಕ ಸರ್ವಪಕ್ಷ ಸಭೆ ಕರೆದರು. ಸಭೆಯಲ್ಲಿ ನೀರು ಬಿಡಲ್ಲ ಅಂದು ಬಿಡ್ತಾ ಇದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಬಳಿಕ ಕೇಂದ್ರಕ್ಕೆ ಹೋಗುವ ಯೋಚನೆ ಮಾಡ್ತಾ ಇದಾರೇನೋ. ಇದಕ್ಕೆ ಐದು ಗ್ಯಾರಂಟಿ.. ಗ್ಯಾರಂಟಿ ಅಂತ ಇವರು ನಿಂತಿದ್ದಾರೆ ಎಂದು ಚಾಟಿ ಬೀಸಿದರು.
80% ಕಮಿಷನ್ ಪಡೆಯುತ್ತಾ ಇದ್ದಾರೆ
ವರ್ಗಾವಣೆ, ಲಂಚ ದಂಧೆ ಬಿಟ್ಟು ಇವರಿಗೆ ಏನು ಗೊತ್ತಿಲ್ಲ. ಬಿಜೆಪಿನಾ 40% ಅಂತ ಹೇಳ್ತಾ ಇದ್ರು. ಇವರು 80% ಕಮಿಷನ್ ಪಡೆಯುತ್ತಾ ಇದ್ದಾರೆ. ರಾಜ್ಯದಲ್ಲಿ ಟ್ರಾನ್ಸಫರ್ ದಂಧೆ ನಡೆಯುತ್ತಲೇ ಇದೆ. ಸಂಕಷ್ಟ ಸೂತ್ರವನ್ನು ಸಿದ್ದಪಡಿಸುವ ಬದಲು, ಗ್ಯಾರಂಟಿ ಅಂತ ಕುಳಿತಿದ್ದಾರೆ. ಡ್ಯಾಂ ವಸ್ತುಸ್ಥಿತಿ ಬಗ್ಗೆ ಗಮನವರಿಸಬೇಕಾಗಿತ್ತು. ಇದನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು ಎಂದು ಛೇಡಿಸಿದರು.
ಗ್ಯಾರಂಟಿ ಜಾತ್ರೆ ಮಾಡ್ತಾ ಇದ್ದಾರೆ
ಜೆಡಿಎಸ್ ನಾಯಕರು ಅಮೀತ್ ಶಾ ಹಾಗೂ ಜೆ.ಪಿ. ನಡ್ಡಾ ಜೊತೆಗೆ ಕಾವೇರಿ ವಿಚಾರ ಮಾತನಾಡಿದ್ದಾರೆ. ಇವರು ಇಲ್ಲಿಯವರೆಗೆ ಏನು ಮಾತಾಡಿಲ್ಲ. ಬರಿ ಗ್ಯಾರಂಟಿ ಜಾತ್ರೆಯನ್ನು ಮಾಡ್ತಾ ಇದ್ದಾರೆ. ದೇವೇಗೌಡರು ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ. ಇವರು ಮಾತ್ರ ರಾಜಕೀಯ ಮಾಡ್ತಾ ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.