ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡುವ ಮೂಲಕ ರಾಜ್ಯದ ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಸಿಡಬ್ಲುಎಂಎ ಆದೇಶದಂತೆ ನೀರು ಬಿಡುವುದಾದರೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಲು ಏನಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸೆ.12 ರ ನಂತರ ನೀರು ತಮಿಳುನಾಡಿಗೆ ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೊರ್ಟ್ ಮುಂದೆ ಅಪಿಡವಿಟ್ ಹಾಕಿದೆ. ಅದಕ್ಕೆ ತಾವು ಬದ್ದರಾಗಿರಬೆಕಲ್ಲ. ಸರ್ಕಾರದ ಅಪಿಡವಿಟ್ ಅಂದರೆ ಸುಮ್ಮನೆ ಅಲ್ಲ. ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಮುಂದೆ ತಾನೇ ಸುಳ್ಳು ಹೇಳುತ್ತಿದೆ ಎಂದಾಯಿತು ಎಂದು ಅಭಿಪ್ರಾಯಪಟ್ಟರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾನು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇನೆ ಎಂದು ಹೇಳಿದ್ದಾರೆ. ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೇನು ಆಗುವುದಿಲ್ಲ. ಅದರ ಅಗತ್ಯ ನನಗಿಲ್ಲ. ಸರ್ಕಾರದ ನಡೆ ರಾಜ್ಯದ ರೈತರನ್ನು, ಕಾವೇರಿ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯದ ಹಿತ ದೃಷ್ಟಿಯಿಂದ ನಾನು ಸಲಹೆ ನೀಡಿದ್ದೇನೆ. ಸರ್ಕಾರ ನಮ್ಮ ಸಲಹೆಯನ್ನು ಸ್ವೀಕರಿಸಲು ಸಿದ್ದವಿಲ್ಲ. ಸರ್ಕಾರ ನಡೆಸುವವರಿಗೆ ಜವಾಬ್ದಾರಿ, ಅರಿವು ಇರಬೇಕು. ವಕೀಲರು ಯಾವಾಗಲೂ ನೀರು ಬಿಡುವಂತೆ ಸಲಹೆ ನಿಡುತ್ತಾರೆ. ನಾವು ಅದನ್ನು ಬದಲಾಯಿಸಿದ್ದೇವು. ನಮ್ಮ ಅವಧಿಯಲ್ಲಿ ರಾತ್ರೋರಾತ್ರಿ ನೀರು ಬಿಟ್ಟಿಲ್ಲ. ನೀವು ಸಿಡಬ್ಲುಎಂಎ ಆದೇಶ ಪಾಲನೆ ಮಾಡಿದ ಮೇಲೆ ಸುಪ್ರೀಂ ಕೋರ್ಟ್ ಮುಂದೆ ಹೇಳುವುದೇನಿದೆ ಎಂದು ಪ್ರಶ್ನಿಸಿದರು.
ದಾರಿ ತಪ್ಪಿಸುವ ಕೆಲಸ :
ಈಗ ಪ್ರಧಾನಿ ಬಳಿ ಹೋಗುವುದರಲ್ಲಿ ಅರ್ಥವಿಲ್ಲ. 1990 ಮುಂಚೆಯೇ ಈ ವಿಚಾರ ಪ್ರಧಾನಿ ಬಳಿ ಚರ್ಚೆಯಾಗಿದೆ. ಈಗ ಅಲ್ಲಿ ಚರ್ಚೆ ಅಗತ್ಯವಿಲ್ಲ. ಸುಮ್ಮನೆ ರಾಜ್ಯದ ಜನರ ದಾರಿ ತಪ್ಪಿಸಲು ರಾಜ್ಯ ಸರ್ಕಾರ ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದೆ ಎಂದರು.
ನಮ್ಮ ವಕೀಲರು ತಮಿಳುನಾಡಿನ ಅಣೆಕಟ್ಟುಗಳಲ್ಲಿನ ನೀರಿನ ವಸ್ತುಸ್ಥಿತಿ, ಅವರು ಬಳಕೆ ಮಾಡಿರುವ ನೀರಿನ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡುವ ಕೆಲಸ ಮಾಡದಿದ್ದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ರಾಜ್ಯದ ಪರ ವಕೀಲರು ಮೊದಲಿನಿಂದಲು ಇದ್ದಾರೆ. ನಮ್ಮ ಅವಧಿಯಲ್ಲಿಯೂ ಅವರೇ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆ ಕೊಡಲು ನಾವು ಸಿದ್ದರಿದ್ದೇವೆ. ಅವರು ಸಲಹೆ ತೆಗೆದುಕೊಳ್ಳಲು ಸಿದ್ದರಿಲ್ಲದಿದ್ದರೆ ಏನು ಮಾಡುವುದು ಎಂದರು.
ತಮಿಳುನಾಡು ಸಹಕರಿಸುವುದಿಲ್ಲ :
ಇನ್ನು ಮಾಜಿ ಪ್ರಧಾನಿ ದೇವೆಗೌಡರು ನ್ಯಾಯಾಲಯದ ಹೊರಗೆ ಈ ವಿಷಯ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ನೀಡಿರುವ ಸಲಹೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾತುಕತೆಗೆ ತಮಿಳುನಾಡು ಸಹಕಾರ ನೀಡುವುದಿಲ್ಲ. ಮೊದಲಿನಿಂದಲೂ ಅವರು ಅಸಹಕಾರ ತೋರುತ್ತಲೇ ಬಂದಿದ್ದಾರೆ ಎಂದರು.
ತಮಿಳುನಾಡು ಸಂಸದರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ನಮ್ಮ ಸಂಸತ್ ಸದಸ್ಯರು ಕೇಂದ್ರ ನಿರಾವರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ಕ್ರಾಂತಿಕಾರಿ ನಿರ್ಧಾರ :
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ವಿಧೇಯಕ್ಕೆ ಒಪ್ಪಿಗೆ ನೀಡಿರುವುದು ಒಂದು ಕ್ರಾಂತಿಕಾರಿ ನಿರ್ಣಯ. 2009 ರಲ್ಲಿ ಯುಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಿತ್ತು. ಆದರೆ, ಲೋಕಸಭೆಯಲ್ಲಿ ಯುಪಿಎ ಸದಸ್ಯ ಪಕ್ಷಗಳೇ ಒಪ್ಪಿರಲಿಲ್ಲ. ಜನಸಂಖ್ಯೆಯಲ್ಲಿ ಶೇ 50% ರಷ್ಟಿರುವ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿರುವುದು ಒಂದು ಕ್ರಾಂತಿಕಾರಕ ನಡೆ, ಕಾಂಗ್ರೆಸ್ ಇದರ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿರುವುದು ವಿಪರ್ಯಾಸ. ಕೇವಲ ಬಿಲ್ ಸಿದ್ದಪಡಿಸುವುದು ಮಾತ್ರವಲ್ಲ ಎಲ್ಲ ಪಕ್ಷಗಳನ್ನು ಒಪ್ಪಿಸಿ ಬಿಲ್ ಪಾಸ್ ಮಾಡುವುದು ಮುಖ್ಯ. ಕೇಂದ್ರ ಸರ್ಕಾರ ಈಗ ಎಲ್ಲರ ಒಪ್ಪಿಗೆ ಪಡೆದು ಕಾಯ್ದೆಯಾಗಿ ಜಾರಿಗೆ ತರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.