ಮಂಡ್ಯ :ಕಾವೇರಿ ಹೋರಾಟ ಮತ್ತೆ ಭುಗಿಲೆದ್ದಿದ್ದು, ಪ್ರಾಧಿಕಾರದ ಆದೇಶವನ್ನ ವಿರೋಧಿಸಿ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಮತ್ತೆ ತಮಿಳುನಾಡಿಗೆ ನೀರು ಬಿಡಲು ಪ್ರಾಧಿಕಾರದ ಆದೇಶ ಹಿನ್ನಲೆ, ಕಾವೇರಿ ನದಿ ಬಳಿ ಅನ್ನದಾತರು ಪ್ರತಿಭಟನೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿಯಿಂದ, ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಮತ್ತೆ ಕಾವೇರಿ ಶಾಕ್: ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ!
ಕಾವೇರಿ ನಿರ್ವಹಣಾ ಪ್ರಾಧಿಕಾರ ಕೊಟ್ಟಿರುವ ತೀರ್ಮಾನ ನೋಡಿದ್ರೆ, ಕಾನೂನು ಇಷ್ಟೊಂದು ದುರ್ಬಲವಾಗಿದ್ಯಾ ಅನಿಸುತ್ತದೆ. ನಮಗೇ ಕುಡಿಯಲು ನೀರಿಲ್ಲ. ಈಗಾಗಲೇ ರೈತರು ನೀರು ಬಿಟ್ಟು ಎದೆಯ ಮೇಲೆ ಕಲ್ಲು ಹಾಕೊಂಡಿದ್ದಾರೆ. ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕಾದ ಜವಾಬ್ದಾರಿ ಇದೆ. ನೀರಿನ ಕೊರತೆ ಬಗ್ಗೆ ಮನದಟ್ಟು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕು.
ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡದೆ, ಎಲ್ಲಾ ನಾಯಕರು ಒಟ್ಟಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಉಗ್ರ ಚಳುವಳಿ ಮಾಡುತ್ತೇವೆಂದು ರೈತರು ಎಚ್ಚರಿಕೆ ಕೊಟ್ಟಿದ್ದಾರೆ.