ಬೆಳಗಾವಿ : ರಾಜ್ಯಕ್ಕೆ ಮೂರು ಉಪಮುಖ್ಯಮಂತ್ರಿ ಹುದ್ದೆ ಅಗತ್ಯವಿದೆಯೇ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಇದೀಗ ಕೇವಲ ಸಚಿವ ಕೆ.ಎನ್.ರಾಜಣ್ಣ ಇಂಥ ಬೇಡಿಕೆ ಮುಂದಿಟ್ಟಿದ್ದಾರೆ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಹೈಕಮಾಂಡ್‌ಗೆ ಕೆ.ಎನ್.ರಾಜಣ್ಣ ಅವರು ಪತ್ರಬರೆದಿರುವ ವಿಚಾರ ತಿಳಿದಿದೆ. ರಾಜಣ್ಣ ಹೇಳಿದ ಮೇಲೆ ಚರ್ಚೆ ಶುರುವಾಗಬಹುದು. ಡಿಸಿಎಂ ಹುದ್ದೆ ಅಗತ್ಯ ಇದೆಯೋ, ಇಲ್ವೋ ಎನ್ನುವುದನ್ನು ಪಕ್ಷ ತೀರ್ಮಾನ ಮಾಡಬೇಕು. ಉಪಮುಖ್ಯಮಂತ್ರಿ ಸ್ಥಾನ ಬೇಕೆಂದು ಬಹಳಷ್ಟು ಜನ ಹೇಳಿದ್ದಾರೆ. ಅವರವರ ಸಾಮರ್ಥ್ಯ ನೋಡಿ ಪಕ್ಷ ಆ ಸ್ಥಾನ ನೀಡುತ್ತದೆ. ಆದರೆ, ನಾನಂತೂ ಡಿಸಿಎಂ ಹುದ್ದೆ ಆಕಾಂಕ್ಷಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ನೀರು ಹರಿಸಲು ಸೂಚನೆ: ಕಪ್ಪು ಬಾವುಟ ಪ್ರದರ್ಶಿಸಿದ ರೈತರು!
ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್ ಅವರ ಮನೆಗೆ ಹೋಗಿರುವುದು ನಿಜ ಎಂದಿರುವ ಸತೀಶ್ ಜಾರಕಿಹೊಳಿ, ಹರಿಪ್ರಸಾದ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಭೇಟಿಯಾಗಿ ಪಕ್ಷದ ವಿಚಾರವಾಗಿ ಚರ್ಚೆ ನಡೆಸಿದ್ದೇವೆಂದರು.