ತುಮಕೂರು: ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿ ಆಗಬೇಕು. ಒಂದು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರಿಗೆ, ಎರಡನೇಯದು ಅಲ್ಪಸಂಖ್ಯಾತ ಮುಖಂಡರಿಗೆ ಹಾಗೂ ಮೂರನೇಯದು ಲಿಂಗಾಯತ ಸಮುದಾಯಕ್ಕೆ ಕೊಡಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯ ಮೊನ್ನೆ ನಡೆದ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದೆ. ಈ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಪಕ್ಷಕ್ಕೆ ಲಾಭ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ಈ ವಿಚಾರವನ್ನು ಪಕ್ಷದ ಹೈಕಮಾಂಡ್ಗೆ ಮುಟ್ಟಿಸುವ ಕೆಲಸ ನಾವು ಮಾಡುವುದು ಸೂಕ್ತ. ಹೈಕಮಾಂಡ್ಗೆ ಪತ್ರ ಬರೆಯಬೇಕು ಅಂತ ಅಂದುಕೊಂಡಿದ್ದೇನೆ. ವರ್ಕಿಂಗ್ ಕಮಿಟಿ ಮೀಟಿಂಗ್ ಹೈದರಾಬಾದ್ನಲ್ಲಿ ಇರುವ ಕಾರಣ ಬ್ಯುಸಿ ಇದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಕೇಂದ್ರ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ನಡೆಯಲಿದೆ ಎಂದರು.
ಇದು ನನ್ನ ಕೊನೆಯ ಚುನಾವಣೆ
ಲೋಕಸಭಾ ಚುನಾವಣೆಗೆ ಈಗಿರುವ ಸಮುದಾಯದ ಬೆಂಬಲ ಹೆಚ್ಚಿಸಿಕೊಳ್ಳಲು ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕಿದೆ. ನಾನು ಡಿಸಿಎಂ ಆಕಾಂಕ್ಷಿ ಅಲ್ಲ, ಇದು ನನ್ನ ಕೊನೆಯ ಚುನಾವಣೆ. ನಾನು ಸಹಕಾರಿ ಸಚಿವ ಸ್ಥಾನ ಇರೋವರೆಗೂ ಬಡವರ ಸೇವೆ ಮಾಡ್ತೀನಿ ಎಂದು ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ನೀಡಿದರು.