Sunday, December 22, 2024

ದೇವಸ್ಥಾನದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ.. ಸಬ್ಸಿಡಿ ಪಡೆಯಿರಿ : ರಾಮಲಿಂಗರೆಡ್ಡಿ

ಬೆಂಗಳೂರು : ‘ಕಾಶಿ, ಗಯಾ, ಶಾರದಾಂಬೆಗೆ ಹೋಗುವವರಿಗೆ ಆ್ಯಪ್‌ ಅನ್ನು ಕೂಡ ಬಿಡುಗಡೆ ಮಾಡಲಾಗುವುದು. ಯಾತ್ರೆಗೆ ಹೋಗುವವರಿಗೆ ಸಬ್ಸಿಡಿ ಕೂಡ ಹೆಚ್ಚಳ ಮಾಡಲಾಗುತ್ತದೆ. ಈ ಹಿಂದೆ ಯಾತ್ರೆಗೆ ಹೋದವರು ಲೆಟರ್ ತರಬೇಕಿತ್ತು. ಆದರೆ, ಈಗ ದೇವಸ್ಥಾನದ ಮುಂದೆ ನಿಂತು ಒಂದು ಫೋಟೋ ತೆಗೆದು ಹಾಕಿದರೆ ಸಬ್ಸಿಡಿ ಸಿಗಲಿದೆ’ ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಮುಖ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರು ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ. ದೇವಾಲಯಗಳಲ್ಲಿ ಆರ್​ಒ (RO) ಪ್ಲಾಂಟ್‌ಗಳನ್ನು ಹಾಕುವಂತೆ, ಸರಿಯಾದ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದರು.

ಮುಖ್ಯವಾಗಿ ದೇವಾಲಯದ ಆವರಣದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ದೇವಾಲಯದ ಸುತ್ತ 100 ಮೀಟರ್ ಅಂತರದಲ್ಲಿ ಮದ್ಯ, ಸಿಗರೇಟು, ಗುಟ್ಕಾ ಮಾರಾಟ ನಿಷೇಧಿಸಲಾಗಿದೆ. ದೇವಾಲಯದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಭಕ್ತಾದಿಗಳಿಗೆ ಅನುಕೂಲವಾಗುವಂತೆ ಆನ್​ಲೈನ್​ನಲ್ಲೇ ಪೂಜಾ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲೇ ಆ್ಯಪ್‌ ಅನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಹಾಲುಣಿಸಲು ಪ್ರತ್ಯೇಕ ಕೊಠಡಿ

65 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲ ಚೇತನರಿಗೆ ಸುಗಮವಾಗಿ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು. ದೇವಸ್ಥಾನಗಳಲ್ಲಿ ತಾಯಂದಿರಿಗೆ ಶಿಶು ಆರೈಕೆ ಮಾಡಲು ಹಾಗೂ ಹಾಲುಣಿಸುವ ತಾಯಂದಿರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಸುರಕ್ಷಣೆ ದೃಷ್ಟಿಯಿಂದ ಉತ್ತಮವಾದ, ಸರಿಯಾಗಿ ಕೆಲಸ ಮಾಡುವ ಸಿಸಿಟಿವಿಯನ್ನು ಅಳವಡಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES