ಮೈಸೂರು : ‘I.N.D.A.I ಮೈತ್ರಿ ಸಲುವಾಗಿ ರಾಜ್ಯದ ರೈತರ ಹಿತ ಹಾಳು ಮಾಡುತ್ತಿದ್ದಾರೆ. ರಾಜ್ಯದ ಜನ 135 ಸೀಟು ಕೊಟ್ಟಿದ್ದಾರೆ. ಇನ್ನು 5 ವರ್ಷ ಯಾರು ಏನು ಮಾಡೋಕ್ಕಾಗಲ್ಲ ಅಂದುಕೊಂಡಿದ್ದಾರೆ. ಇದೇ ತರ ನೀರು ಬಿಟ್ಟರೆ ಬೆಂಗಳೂರು, ಮೈಸೂರು, ಮಂಡ್ಯ ಎಲ್ಲಾ ಕಡೆ ಕುಡಿಯುವ ನೀರಿಗೂ ಹಾಹಾಕಾರ ಬರುತ್ತೆ’ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಈಗಲೂ ಕದ್ದು ಮುಚ್ಚಿ ನೀರನ್ನು ಹರಿಸಲಾಗುತ್ತಿದೆ. ಈಗಲೂ ಡ್ಯಾಂಗೆ ಹೋಗಿ ನೋಡಿ ಹೊರ ಹರಿವು ಪ್ರಮಾಣ ಪರೀಕ್ಷೆ ಮಾಡಿ. ಈ ವಿಚಾರವಾಗಿ ನಾನು ಚಾಲೆಂಜ್ ಮಾಡುತ್ತೇನೆ ಎಂದು ಗುಡುಗಿದರು.
ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸೆಪ್ಟಂಬರ್ 13ರಿಂದ ನೀರು ಹರಿಸಲಾಗುತ್ತಿದೆ. ನಾವು ಈ ವಿಚಾರವಾಗಿ ಹೋರಾಟ ಮಾಡುತ್ತೇವೆ. ಹೇಮಾವತಿ ಡ್ಯಾಂನಲ್ಲಿ12 ಟಿಎಂಸಿ ನೀರು ಇದೆ. ಹಾರಂಗಿ, ಕಬಿನಿ ಡ್ಯಾಂಗಳು ಬರಿದಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಕೊಡಬಾರದು. ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಅಳತೆ ಮೀರಿದ ಬೆಳೆ ಬೆಳೆದಿದ್ದಾರೆ
ತಮಿಳುನಾಡಿನಲ್ಲಿ 4 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ಬೆಳೆದಿದ್ದಾರೆ. ಅಳತೆಗೆ ಮೀರಿದ ಬೆಳೆ ಬೆಳೆದಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಇದನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಒತ್ತಾಯಿಸಿದರು.