ಬೆಂಗಳೂರು : ನಮಗೆ ನೀರು ಇಲ್ಲದಿದ್ದರೂ ಅಲ್ಲಿಗೆ ನೀರು ಬಿಡುತ್ತಿದ್ದಾರೆ ಅಂದ್ರೆ ಪರಸ್ಪರ ಸಹಕರಿಸುತ್ತಿದ್ದಾರೆ. ಸಿದ್ದರಾಮಯ್ಯ ಇಲ್ಲಿನ ಮುಖ್ಯಮಂತ್ರಿಗಳಾ? ತಮಿಳುನಾಡಿನ ಮುಖ್ಯಮಂತ್ರಿಗಳಾ? ಅಂತ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಗುಡುಗಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಡಿಎಂಕೆಗೆ ಸಹಕರಿಸುತ್ತಿದೆ. ಸರ್ಕಾರ ರಾಜಕೀಯ ಮಾಡುತ್ತಿದೆ. ಅಲ್ಲಿ ಡಿಎಂಕೆ ಇರುವುದರಿಂದ I.N.D.I.A ಒಕ್ಕೂಟ ಬಲಪಡಿಸಲು ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಹರಿಸುತ್ತಿದೆ. ಡಿಎಂಕೆ ಪಕ್ಷವನ್ನು ತೃಪ್ತಿ ಪಡಿಸಲು ನೀರು ಹರಿಸಲಾಗುತ್ತಿದೆ, ಇದು ಅಕ್ಷಮ್ಯ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನೀರಿಲ್ಲ, ಮೇವಿಲ್ಲ. ಜನ ಕಷ್ಟದಲ್ಲಿ ಇದಾರೆ. ತಮಿಳುನಾಡಿನಲ್ಲಿ ಬೆಳೆ ವಿಸ್ತರಣೆ ಮಾಡಲಾಗಿದೆ. ಇಷ್ಟು ನೀರು ಬಿಡುವುದು ಹೇಗೆ ಅಂತ ಸರ್ಕಾರ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲ ಆಗಿದೆ. ರಾಜ್ಯದ ಪರಿಸ್ಥಿತಿ ಹದಗೆಡುತ್ತಿದೆ. ರಾಜ್ಯದ ಪರಿಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ಗೆ ಈಗಲಾದರೂ ಸರ್ಕಾರ ಮನವರಿಕೆ ಮಾಡಿಕೊಡಲಿ ಎಂದು ಸಲಹೆ ನೀಡಿದರು.