ಬೆಂಗಳೂರು : ಡೆಲಿವರಿ ಬಾಯ್ಸ್ಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬಜೆಟ್ನಲ್ಲಿ ನೀಡಿದ್ದ ಭರವಸೆಯನ್ನು ಸಿದ್ದರಾಮಯ್ಯ ಸರ್ಕಾರ ಈಡೇರಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಡೆಲಿವರಿ ಬಾಯ್ಸ್ ( ಗಿಗ್ ಕಾರ್ಮಿಕರಿಗೆ) 2 ಲಕ್ಷ ರೂಪಾಯಿ ಜೀವವಿಮೆ ಮತ್ತು 2 ಲಕ್ಷ ರೂಪಾಯಿ ಅಪಘಾತ ಪರಿಹಾರ ವಿಮಾ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಡೆಲಿವರಿ ಬಾಯ್ ಗಳು ನಿತ್ಯ ಗ್ರಾಹಕರಿಗೆ ಆಹಾರ, ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ನಿಗದಿತ ಸಮಯದಲ್ಲಿ ಆರ್ಡರ್ ಮುಟ್ಟಿಸಬೇಕೆಂಬ ಕಾರಣಕ್ಕಾಗಿ ಸಂಚಾರ ದಟ್ಟಣೆಯ ನಡುವೆ ಪ್ರಾಣವನ್ನು ಪಣಕ್ಕಿಟ್ಟು ವಾಹನ ಚಾಲನೆ ಮಾಡುತ್ತಿದ್ದಾರೆ.
ಇಂತಹ ಅಪಾಯಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳ ನಿತ್ಯದ ಬದುಕಿನ ಸವಾಲುಗಳನ್ನು ಅರ್ಥೈಸಿಕೊಂಡು, ಅಪಘಾತ, ಪ್ರಾಣಹಾನಿ ಸಂಭವಿಸಿದಾಗ ಅವರ ನೆರವಿಗೆ ಧಾವಿಸಬೇಕು ಎಂಬ ಉದ್ದೇಶದಿಂದ ಅಪಘಾತ ವಿಮೆ ಹಾಗೂ ಜೀವ ವಿಮಾ ಸೌಲಭ್ಯ ನೀಡುವ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.