ಬೆಂಗಳೂರು : ಜೈ ಹೋ..! ರಾವಣನ ನೆಲದಲ್ಲಿ ಲಂಕಾ ದಹನ! ಬೊಂಬಾಟ್ ಬ್ಯಾಟಿಂಗ್ ಮೂಲಕ ನಿನ್ನೆ ಬದ್ಧ ವೈರಿ ಪಾಕಿಗಳ ಹುಟ್ಟಡಗಿಸಿದ್ದ ಭಾರತ, ಇಂದು ಬೌಲಿಂಗ್ನಲ್ಲಿ ಕಮಾಲ್ ಮಾಡಿ ಲಂಕಾ ದಹನ ಮಾಡಿದೆ.
ಕೊಲಂಬೊದ ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 41ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಭಾರತ ಫೈನಲ್ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಲಂಕಾ ಸ್ಪಿನ್ ದಾಳಿಗೆ ತತ್ತರಿಸಿತು. 49.1 ಓವರ್ ಗಳಲ್ಲಿ 213 ರನ್ ಗಳಿಸಿ ಆಲ್ಔಟ್ ಆಯಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ (53) ಸಿಡಿಸಿದರು. ಶುಭ್ಮನ್ ಗಿಲ್ 19, ಕೆ.ಎಲ್ ರಾಹುಲ್ 39, ಇಶಾನ್ ಕಿಶನ್ 33, ಅಕ್ಷರ್ ಪಟೇಲ್ 26 ರನ್ ಗಳಿಸಿದರು.
ಭಾರತ ನೀಡಿದ 214 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಪಡೆ ಭಾರತದ ವೇಗಿಗಳ ಶಿಸ್ತುಬದ್ದ ದಾಳಿಗೆ ಧ್ವಂಸವಾಯಿತು. 41.3 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 41 ರನ್ಗಳ ಜಯ ಗಳಿಸಿತು. ಭಾರತದ ಪರ ಕುಲ್ದೀಪ್ ಯಾದವ್ 4, ರವೀಂದ್ರ ಜಡೇಜಾ ಹಾಗೂ ಬುಮ್ರಾ ತಲಾ 2, ಸಿರಾಜ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಏಕಾಂಗಿ ಹೋರಾಟ ವ್ಯರ್ಥ
ಲಂಕಾ ಪರ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಏಕಾಂಗಿ ಹೋರಾಟ ನಡೆಸಿದ ಯುವ ಸ್ಪಿನ್ನರ್ ದುನಿತ್ ಆಟ ವ್ಯರ್ಥವಾಯಿತು. ಬೌಲಿಂಗ್ನಲ್ಲಿ ಕಮಾಲ್ ಮಾಡಿದ ದುನಿತ್, ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ (5 ವಿಕೆಟ್) ಪಡೆದು ಮರ್ಮಾಘಾತ ನೀಡಿದರು.
ಲಂಕಾಗೆ ಬಲ ತುಂಬಿದ ದುನಿತ್
ಬಳಿಕ ಬ್ಯಾಟಿಂಗ್ನಲ್ಲಿ ಲಂಕಾ ಪಡೆಗೆ ಬಲ ತುಂಬಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. 46 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ನೊಂದಿಗೆ ಅಜೇಯ 42 ರನ್ ಗಳಿಸಿದರು. ಆಲ್ರೌಂಡ್ ಪ್ರದರ್ಶನ ನೀಡಿದ ದುನಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಜನರಾಗಿದ್ದು ಮತ್ತೊಂದು ವಿಶೇಷ.
𝗧𝗵𝗿𝗼𝘂𝗴𝗵 𝘁𝗼 𝘁𝗵𝗲 𝗙𝗶𝗻𝗮𝗹! 🙌
Well done #TeamIndia 👏👏#AsiaCup2023 | #INDvSL pic.twitter.com/amuukhHziJ
— BCCI (@BCCI) September 12, 2023