ಬೆಂಗಳೂರು : ಕಂತೆ ಕಂತೆ ಜೋಡಿಸಿಟ್ಟ ನೋಟು.. ಅಬ್ಬಬ್ಬಾ ಅನ್ನುವಷ್ಟು ಚಿನ್ನ.. ಬೈಕ್‌ಗಳ ಫೋಟೋ ಓರಿಜಿನಲ್ ಕೀ.. ಇವೆಲ್ಲ 23ರ ಹರೆಯದ ಲಕ್ಷ್ಮಿಪತಿ ಎಂಬ ಯುವಕನ ಆಸ್ತಿ. ನೋ ವೇ.. ಇದು ಖತರ್ನಾಕ್ ಖದೀಮನ ಕೈಚಳಕ.
ಈತನ ಹೆಸರು ಲಕ್ಷ್ಮೀಪತಿ(23) ಕೋಟಿ ಕೋಟಿ ಲೂಟಿ ಹೊಡೆದಿರುವ ಇವನು ಪಕ್ಕಾ 420. ಹ್ಯಾಕಿಂಗ್ ಇವನ ಸ್ಕಿಲ್. ಅಂದಹಾಗೆ ಲಕ್ಷ್ಮೀಪತಿ ಆಂಧ್ರಪ್ರದೇಶದ ಚಿತ್ತೂರಿನ ಐಐಐಟಿಯ ಪದವೀಧರ. ಆದ್ರೆ, ಡಿಗ್ರಿ ತಕ್ಕಂಗೆ ಕೆಲಸ ಮಾಡೋದು ಬಿಟ್ಟು ಹ್ಯಾಕ್ ಮಾಡೋಕೆ ಶುರು ಮಾಡಿಕೊಂಡಿದ್ದ.
ರಿವಾರ್ಡ್ 360 ಅನ್ನೋ ಕಂಪನಿಯ ವೆಬ್ ಸೈಟ್ ಹ್ಯಾಕ್ ಮಾಡಿದ್ದ ಈ ಕಿಲಾಡಿ ಆ ಕಂಪನಿಯ ವೋಚರಗಳನ್ನು ಕಳುವು ಮಾಡಿದ್ದ. ಕಸ್ಟಮರ್‌ಗಳು ಅವರ ವೋಚರ್ ಬಳಕೆ ಮಾಡುವ ಮುನ್ನವೇ ಇ-ಕಾಮರ್ಸ್ ಕಂಪನಿ ಮೂಲಕ ಚಿನ್ನ, ಬೆಳ್ಳಿ, ದ್ವಿಚಕ್ರ ವಾಹನ, ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣವನ್ನು ಹೈಜಾಕ್ ಮಾಡಿದ್ದ. ಆದ್ರೆ, ಎಂಥಾ ಕಳ್ಳನೂ ಒಂದಿಲ್ಲೊಂದು ದಿನ ಸಿಕ್ಕಿಬಿದ್ದೇ ಬೀಳ್ತಾನೆ ಅನ್ನೋ ಮಾತಿನಂತೆ, ಇದೀಗ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ರ ಕೈಗೆ ಈ ಕಿಲಾಡಿ ಸಿಕ್ಕಿಬಿದ್ದಿದ್ದಾನೆ.
ಬರೋಬ್ಬರಿ 4.16 ಕೋಟಿ ವಸ್ತು ವಶ
ಲಕ್ಷ್ಮಿಪತಿಯಿಂದ 3.4 ಕೋಟಿ ಮೌಲ್ಯದ 5 ಕೆಜಿ ಚಿನ್ನ, 21 ಲಕ್ಷ ಮೌಲ್ಯದ 27 ಕೆಜಿ ಬೆಳ್ಳಿ, 11 ಲಕ್ಷ ನಗದು, 7 ಬೈಕ್ , 2 ಲ್ಯಾಪ್ ಟಾಪ್, 3 ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲದೇ ಫ್ಲಿಪ್ ಕಾರ್ಟ್ ವ್ಯಾಲೇಟ್‌ನಿಂದ ಕದ್ದಿದ್ದ 26 ಲಕ್ಷ ಹಣ ಮತ್ತು ಅಮೇಜಾನ್ ವಾಲೇಟ್‌ನ 3.50 ಲಕ್ಷ ಹಣವನ್ನು ಫ್ರೀಜ್ ಮಾಡಲಾಗಿದೆ. ಒಟ್ಟಾರೆಯಾಗಿ ಲಕ್ಷ್ಮಿಪತಿ 4.16 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದನ್ನ ವಶಕ್ಕೆ ಪಡೆಯಲಾಗಿದೆ.
ಖತರ್ನಾಕ್ ಕಿಲಾಡಿ ಹೆಡೆಮುರಿ ಕಟ್ಟಿದ ಆಗ್ನೇಯ ಪೊಲೀಸರ ಅತ್ಯುತ್ತಮ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು 50 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ. ಸದ್ಯ, ಹ್ಯಾಕಿಂಗ್ ಸಾಮ್ರಾಜ್ಯದಲ್ಲಿ ತನ್ನದೇ ಪ್ರಭುತ್ವ ಸೃಷ್ಟಿಸಿಕೊಳ್ಳುತ್ತಿದ್ದ ಲಕ್ಷ್ಮಿಪತಿಯ ಕೈಗೆ ಕೋಳ ತೊಡಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.