ಮಂಗಳೂರು: ಈ ಬಾರಿ ಗಣೇಶ ಚತುರ್ಥಿಗೆ ಸರ್ಕಾರಿ ರಜೆಯ ಬಗ್ಗೆ ಭಕ್ತಾದಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲ ಮುಂದುವರಿದಿದೆ.
ಸರಕಾರಿ ಕ್ಯಾಲೆಂಡರ್‌ನಲ್ಲಿ ಸೆ.18ರಂದು ಗಣೇಶ ಚತುರ್ಥಿ ರಜೆ ಎಂದು ಉಲ್ಲೇಖವಾಗಿದ್ದರೆ, ಬಹುತೇಕ ಕ್ಯಾಲೆಂಡರ್‌ಗಳಲ್ಲಿ ಸೆ.19ರಂದೇ ಗಣೇಶ ಚತುರ್ಥಿ ಎಂದು ನಮೂದಿಸಲಾಗಿದೆ. ಸೆ.18ರಂದು ಗಣೇಶ ಚತುರ್ಥಿ ಆಚರಣೆಗೆ ಕರಾವಳಿ ಭಾಗದ ವೈದಿಕರು, ಜ್ಯೋತಿಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನಾಗರಿಕರು ಸರಕಾರಿ ರಜೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆ.19ರಂದು ಆಚರಣೆಯಾಗುತ್ತಿದ್ದು, ಅದೇ ದಿನ ಸರಕಾರಿ ರಜೆ ಘೋಷಣೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ
ಶಾಸ್ತ್ರಗಳ ಪ್ರಕಾರ ಗಣೇಶ ಚತುರ್ಥಿ ಘಳಿಗೆ, ಸೂರ್ಯೋದಯದ ಹೊತ್ತು ಶಾಸ್ತ್ರ ಇದ್ದರೆ, ಮಹಾಶಿವರಾತ್ರಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಘಳಿಗೆ ಮಧ್ಯರಾತ್ರಿ ಯಾಗಿರುತ್ತದೆ. ಈ ಲೆಕ್ಕಾಚಾರವನ್ನು ತಾಳೆ ಹಾಕಿದಾಗ ಸೆ.18ರ ಬೆಳಗ್ಗೆ ತದಿಗೆ ತಿಥಿಯಾದರೆ, ಮಧ್ಯಾಹ್ನ 12.38ರಿಂದ ಚೌತಿ ಆರಂಭವಾಗಿ, ಸೆ.19ರ ಮಧ್ಯಾಹ್ನ 1.42ರವರೆಗಿದೆ. ಗಣೇಶ ಚೌತಿ ತಿಥಿ ಸೂರ್ಯೋದಯ ಹೊತ್ತಿನಲ್ಲಿರ ಬೇಕಾದ ಕಾರಣ ಯಾವುದೇ ಲೆಕ್ಕಾಚಾರದಲ್ಲೂ ಸೆ.18 ರಂದು ಗಣೇಶ ಚತುರ್ಥಿ ಆಗಲು ಸಾಧ್ಯವಿಲ್ಲ ಎನ್ನುತ್ತಾರೆ ಜ್ಯೋತಿಷಿ ಚಂದ್ರಶೇಖರ ಭಟ್ ಕಿದೂರು.